
ವಿಟ್ಲ / ಪುತ್ತೂರು: ಅಪ್ರಾಪ್ತ ಬಾಲಕನೊಬ್ಬನಿಗೆ ಬಸ್ ಪ್ರಯಾಣದ ವೇಳೆ ಅನುಚಿತವಾಗಿ ವರ್ತಿಸಿ, ಬಳಿಕ ಮನೆಗೂ ಬಂದು ಲೈಂಗಿಕ ಕಿರುಕುಳ ಹಾಗೂ ಬೆದರಿಕೆ ಹಾಕಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ.


ವಿಟ್ಲ ಕೊಂಡಗಾಯಿ ನಿವಾಸಿ ಉಮೇಶ್ (53) ಬಂಧಿತ ಆರೋಪಿ.
ಘಟನೆಯ ವಿವರ: ಆಗಸ್ಟ್ 15 ರಂದು ಸಂತ್ರಸ್ತ ಅಪ್ರಾಪ್ತ ಬಾಲಕನು ವಿಟ್ಲ ಠಾಣಾ ವ್ಯಾಪ್ತಿಯ ಅಳಿಕೆಯಿಂದ ಪುತ್ತೂರು ಕಡೆಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ವಿಟ್ಲ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ಸನ್ನೇರಿದ ಆರೋಪಿ ಉಮೇಶ್ ಬಾಲಕನ ಪಕ್ಕದಲ್ಲಿ ಕುಳಿತುಕೊಂಡಿದ್ದಾನೆ. ಪ್ರಯಾಣದುದ್ದಕ್ಕೂ ಬಾಲಕನೊಂದಿಗೆ ಅಸಭ್ಯ ಹಾಗೂ ಅನುಚಿತವಾಗಿ ವರ್ತಿಸಿದ್ದಾನೆ.
ಅಷ್ಟಕ್ಕೇ ನಿಲ್ಲದೆ, ಬಾಲಕನು ತನ್ನ ಮನೆಗೆ ತಲುಪಿದಾಗ ಆತನ ಬೆನ್ನಹಿಂದೆಯೇ ಮನೆಗೂ ಬಂದು ಲೈಂಗಿಕ ಕಿರುಕುಳ ನೀಡಿ, ಯಾರಿಗಾದರೂ ವಿಷಯ ತಿಳಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.


ಪೋಕ್ಸೋ ಕಾಯ್ದೆಯಡಿ ಕೇಸ್ & ಬಂಧನ: ಈ ಕುರಿತು ಸಂತ್ರಸ್ತ ಬಾಲಕ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 179/2026, ಕಲಂ: 4(2) ಪೋಕ್ಸೋ (POCSO) ಕಾಯ್ದೆ 2012 ಹಾಗೂ ಕಲಂ: 351(2) BNS 2023 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ತ್ವರಿತ ಕಾರ್ಯಾಚರಣೆ ನಡೆಸಿದ ವಿಟ್ಲ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
