ಒಂದೇ ಕುಟುಂಬದ ಮೂವರಿಗೆ ’94ಸಿ’ ಜಾಗ ಮಂಜೂರು:ಕೇಸ್ ವರ್ಕರ್‌ನ ಚಳಿ ಬಿಡಿಸಿದ ಲೋಕಾಯುಕ್ತ ಅಧಿಕಾರಿ

kadaba times

ಸುಳ್ಯ ತಾಲೂಕು ಕಚೇರಿಗೆ ಉಡುಪಿ ಲೋಕಾಯುಕ್ತ ಡಿವೈಎಸ್‌ಪಿ ನೇತೃತ್ವದ ತಂಡ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದೆ. ಈ ವೇಳೆ ಸಾರ್ವಜನಿಕರೊಬ್ಬರು ಪಂಬೆತ್ತಾಡಿ ಹಾಗೂ ಕೂತ್ಕೂಂಜ ಗ್ರಾಮಗಳಲ್ಲಿ ಒಂದೇ ಕುಟುಂಬದ ಗಂಡ, ಹೆಂಡತಿ ಹಾಗೂ ತಮ್ಮನಿಗೆ ಅಕ್ರಮವಾಗಿ ’94 ಸಿ’ ಯಡಿಯಲ್ಲಿ ಜಾಗ ಮಂಜೂರು ಮಾಡಿರುವ ಕುರಿತು ಆಧಾರಸಹಿತ ದೂರು ನೀಡಿದ್ದು, ಲೋಕಾಯುಕ್ತ ಅಧಿಕಾರಿಗಳು ತಕ್ಷಣವೇ ಕೇಸ್ ವರ್ಕರ್‌ನಿಂದ ಸಂಬಂಧಪಟ್ಟ ಕಡತ ಹಾಗೂ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.

kadaba times
uniq

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ಮುಂದುವರಿದಿದ್ದು, ಸುಳ್ಯ ತಾಲೂಕು ಕಚೇರಿಗೆ ಆಗಸ್ಟ್ 12 ರಂದು ಉಡುಪಿ ಲೋಕಾಯುಕ್ತ ಡಿವೈಎಸ್‌ಪಿ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದೆ.

ಲೋಕಾಯುಕ್ತರ ಎಂಟ್ರಿ ತಾಲೂಕು ಕಚೇರಿಯಲ್ಲಿದ್ದ ಬ್ರೋಕರ್‌ಗಳು ಹಾಗೂ ಅಕ್ರಮ ಎಸಗಿದ ಸಿಬ್ಬಂದಿಗಳಲ್ಲಿ ಭೀತಿ ಮೂಡಿಸಿದ್ದು, ಪರಿಶೀಲನೆ ವೇಳೆ ’94 ಸಿ’ ಯೋಜನೆಯಡಿ ನಡೆದ ಬೃಹತ್ ಅಕ್ರಮವೊಂದು ಕಡತ ಸಹಿತ ಬಯಲಾಗಿದೆ.

ಆಗಸ್ಟ್ 12ರ ಬೆಳಿಗ್ಗೆ ಕಚೇರಿಗೆ ದಿಢೀರ್ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳು, ಕಚೇರಿಯಲ್ಲಿದ್ದ ಸಾರ್ವಜನಿಕರನ್ನು ನೀವು ಯಾವ ಕೆಲಸಕ್ಕಾಗಿ ಬಂದಿದ್ದೀರಿ ಎಂದು ಪ್ರತ್ಯೇಕವಾಗಿ ವಿಚಾರಿಸಿದರು. ಲೋಕಾಯುಕ್ತ ಅಧಿಕಾರಿಗಳ ಕಾರ್ಯಾಚರಣೆ ತಿಳಿಯುತ್ತಿದ್ದಂತೆಯೇ ಕಚೇರಿ ಆವರಣದಲ್ಲಿದ್ದ ಮಧ್ಯವರ್ತಿಗಳು (ಬ್ರೋಕರ್‌ಗಳು) ಅಲ್ಲಿಂದ ಕಾಲ್ಕಿತ್ತರು.

kadaba times
kadaba times

ಒಂದೇ ಕುಟುಂಬದ ಮೂವರಿಗೆ 94ಸಿ ಜಾಗ:

ಪರಿಶೀಲನೆ ವೇಳೆ ಕನಕಮಜಲಿನ ಸೋಮನಾಥ ಎಂಬವರು ’94 ಸಿ’ ವಿಭಾಗದ ಕೇಸ್ ವರ್ಕರ್ ವಿರುದ್ಧ ದೂರು ಹೇಳಿಕೊಳ್ಳಲು ಮುಂದಾದರು. ಈ ವೇಳೆ “ಬಾಯಿ ಮಾತಿನಲ್ಲಿ ಹೇಳಬೇಡಿ, ದಾಖಲೆ ಇದ್ದರೆ ಕೊಡಿ” ಎಂದು ಲೋಕಾಯುಕ್ತ ಡಿವೈಎಸ್‌ಪಿ ಹೇಳಿದರು.ತಕ್ಷಣವೇ ಸೋಮನಾಥ ಅವರು ತಮ್ಮ ಮೊಬೈಲ್‌ನಲ್ಲಿದ್ದ ಅಧಿಕೃತ ದಾಖಲೆಗಳನ್ನು ತೋರಿಸಿ, “ಪಂಬೆತ್ತಾಡಿ ಹಾಗೂ ಕೂತ್ಕೂಂಜ ಗ್ರಾಮಗಳಲ್ಲಿ ಒಂದೇ ಕುಟುಂಬದ ಗಂಡ, ಹೆಂಡತಿ ಮತ್ತು ತಮ್ಮ — ಹೀಗೆ ಮೂವರಿಗೆ 94 ಸಿ ಯಡಿ ಜಾಗ ಮಂಜೂರು ಮಾಡಲಾಗಿದೆ. ಈ ಹಿಂದೆ ದೂರು ನೀಡಿದರೂ ಯಾವುದೇ ಕ್ರಮವಾಗಿಲ್ಲ” ಎಂದು ಅಕ್ರಮವನ್ನು ತೆರೆದಿಟ್ಟರು.

ಕೇಸ್ ವರ್ಕರ್‌ನ ತರಾಟೆಗೆ ತೆಗೆದುಕೊಂಡ ಡಿವೈಎಸ್‌ಪಿ:

ದೂರು ಕೇಳಿದ ಲೋಕಾಯುಕ್ತ ಡಿವೈಎಸ್‌ಪಿ ತಕ್ಷಣವೇ ಸಂಬಂಧಪಟ್ಟ ಕೇಸ್ ವರ್ಕರ್‌ನನ್ನು ಕರೆದು ಪ್ರಶ್ನಿಸಿದರು. “ದೂರುದಾರರು ಜಾಲ್ಸೂರು ಭಾಗದವರು, ಆ ಫೈಲ್ ಇಲ್ಲ ಇರಲಿಲ್ಲ” ಎಂದು ಕೇಸ್ ವರ್ಕರ್ ಸಮರ್ಥಿಸಿಕೊಳ್ಳಲು ಯತ್ನಿಸಿದಾಗ, “ಅಕ್ರಮ ಅಥವಾ ತಪ್ಪು ನಡೆದಿದೆ ಎಂದು ಗೊತ್ತಾದರೆ ಯಾರಾದರೂ ದೂರು ನೀಡಬಹುದು. ಅದೇ ಗ್ರಾಮದವರೇ ಆಗಬೇಕೆಂದಿಲ್ಲ, ಹೀಗೆ ಯಾಕೆ ಮಾಡಿದ್ದೀರಿ?” ಎಂದು ಲೋಕಾಯುಕ್ತರು ತೀವ್ರ ತರಾಟೆಗೆ ತೆಗೆದುಕೊಂಡರು.

ಬಳಿಕ “ನಾನು ಈ ವಿಭಾಗ ವಹಿಸಿಕೊಂಡು ಒಂದು ವರ್ಷವಷ್ಟೇ ಆಗಿದೆ” ಎಂದು ಕೇಸ್ ವರ್ಕರ್ ಹೇಳಿದಾಗ, ಲೋಕಾಯುಕ್ತ ಡಿವೈಎಸ್‌ಪಿ ಅವರು ಅಕ್ರಮ ಮಂಜೂರಾತಿಯ ಫೈಲ್ ನಂಬರ್, ಕೇಸ್ ವರ್ಕರ್ ಹೆಸರು ಸೇರಿದಂತೆ ಅಗತ್ಯ ದಾಖಲೆಗಳನ್ನು ಬರೆದುಕೊಂಡು ಜಪ್ತಿ ಮಾಡಿದರು. ತಾಲೂಕು ಕಚೇರಿಯ ಪ್ರತಿಯೊಂದು ವಿಭಾಗಕ್ಕೂ ತೆರಳಿದ ಲೋಕಾಯುಕ್ತ ಅಧಿಕಾರಿಗಳ ತಂಡ, ತಿಂಗಳುಗಳಿಂದ ಕಡತಗಳನ್ನು ಪೆಂಡಿಂಗ್ ಇಟ್ಟಿರುವುದಕ್ಕೆ ಕಾರಣವೇನು? ಹಾಗೂ ಕಚೇರಿಯಲ್ಲಿ ಒಬ್ಬ ಅಧಿಕಾರಿಯಿಂದ ಇನ್ನೊಬ್ಬ ಅಧಿಕಾರಿಗೆ ಹಣ ರವಾನೆಯಾಗುತ್ತಿರುವ (ಲಂಚದ ವಹಿವಾಟು) ದೂರುಗಳ ಬಗ್ಗೆ ಇಂಚಿಂಚೂ ವಿವರ ಕಲೆಹಾಕಿ ಸುದೀರ್ಘ ವಿಚಾರಣೆ ನಡೆಸಿದರು.

Related Articles

Latest Articles