
ಕಡಬ ಮುಖ್ಯ ಪೇಟೆಯಲ್ಲಿ ರಸ್ತೆಗೆ ಸಾಕುಪ್ರಾಣಿಗಳನ್ನು ಬಿಡುವ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಸಾರ್ವಜನಿಕರ ದೂರಿನ ಮೇರೆಗೆ ರಸ್ತೆಯಲ್ಲಿ ಒಂಟಿಯಾಗಿ ತಿರುಗಾಡುತ್ತಿದ್ದ ಆಡೊಂದನ್ನು ಕಡಬ ಪಟ್ಟಣ ಪಂಚಾಯತ್ ಸಿಬ್ಬಂದಿಗಳು ವಶಕ್ಕೆ ಪಡೆದು ಕಚೇರಿ ವಠಾರಕ್ಕೆ ಕರೆದೊಯ್ದಿದ್ದಾರೆ. ಸಭೆಯ ನಿರ್ಣಯದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದ್ದು, ಮಾಲೀಕರಿಗೆ ದಂಡ ವಿಧಿಸಲಾಗುತ್ತದೆಯೇ ಎಂದು ಕಾದು ನೋಡಬೇಕಿದೆ.


ಕಡಬ:ಕಡಬ ಮುಖ್ಯ ಪೇಟೆಯಲ್ಲಿ ಸಾಕುಪ್ರಾಣಿಗಳು ರಸ್ತೆಯಲ್ಲೇ ಬೇಕಾಬಿಟ್ಟಿ ತಿರುಗಾಡುತ್ತಾ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಕೊನೆಗೂ ಕಡಬ ಪಟ್ಟಣ ಪಂಚಾಯತ್ (ಪ.ಪಂ) ಕಾರ್ಯಾಚರಣೆಗೆ ಇಳಿದಿದೆ.
ಆಗಸ್ಟ್ 10ರ ಸಂಜೆ ಮುಖ್ಯ ರಸ್ತೆಯಲ್ಲಿ ಒಂಟಿಯಾಗಿ ತಿರುಗಾಡುತ್ತಿದ್ದ ಆಡೊಂದನ್ನು ಪ.ಪಂ ಸಿಬ್ಬಂದಿಗಳು ವಶಕ್ಕೆ ಪಡೆದು, ವಾಹನದ ಮೂಲಕ ಕಚೇರಿಯ ವಠಾರಕ್ಕೆ ಕರೆದೊಯ್ದ ಘಟನೆ ವರದಿಯಾಗಿದೆ.
ಸಾಮಾನ್ಯ ಸಭೆಯ ನಿರ್ಣಯದ ಬೆನ್ನಲ್ಲೇ ಕ್ರಮ:
ಕಡಬ ಪೇಟೆಯಲ್ಲಿ ದನ , ಆಡು ಸೇರಿದಂತೆ ಸಾಕುಪ್ರಾಣಿಗಳನ್ನು ರಸ್ತೆಗೆ ಬಿಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ನಿರಂತರ ತೊಂದರೆಯಾಗುತ್ತಿದ್ದರೂ ಪ.ಪಂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ದರು. ಈ ಜನಾಕ್ರೋಶದ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಪ.ಪಂ ಸಾಮಾನ್ಯ ಸಭೆಯಲ್ಲಿ ಸಾಕುಪ್ರಾಣಿಗಳನ್ನು ರಸ್ತೆಗೆ ಬಿಡುವ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕುರಿತು ಅಧಿಕೃತ ನಿರ್ಣಯ ಕೈಗೊಳ್ಳಲಾಗಿತ್ತು.


ಜಾಲತಾಣದಲ್ಲಿ ವೈರಲ್ ಆಗಿದ್ದ ವೀಡಿಯೋ – ಪ.ಪಂಗೆ ಟೀಕೆ:
ಸಭೆಯಲ್ಲಿ ನಿರ್ಣಯ ಕೈಗೊಂಡ ಎರಡೇ ದಿನಗಳಲ್ಲಿ ಮುಖ್ಯ ರಸ್ತೆಯಲ್ಲೇ ಆಡುಗಳ ಗುಂಪು ಸಾಗುತ್ತಿರುವ ದೃಶ್ಯಗಳನ್ನು ಸ್ಥಳೀಯರು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. “ಪ.ಪಂ ಕೈಗೊಂಡ ನಿರ್ಣಯ ಕೇವಲ ಸಭಾಂಗಣದ ಕಡತಕ್ಕೆ ಮಾತ್ರ ಸೀಮಿತವೇ?” ಎಂದು ನೆಟ್ಟಿಗರು ಕಡಬ ಪಟ್ಟಣ ಪಂಚಾಯತ್ ಆಡಳಿತವನ್ನು ಟೀಕಿಸಿದ್ದರು.
ಸಾಮಾಜಿಕ ಜಾಲತಾಣದ ಟೀಕೆ ಹಾಗೂ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿದ ಪಟ್ಟಣ ಪಂಚಾಯತ್ ಸಿಬ್ಬಂದಿಗಳು, ಆಗಸ್ಟ್ 10ರ ಸಂಜೆ ಕಡಬ ಪೇಟೆಯ ಮುಖ್ಯ ರಸ್ತೆಯಲ್ಲಿ ಒಂಟಿಯಾಗಿ ತಿರುಗಾಡುತ್ತಿದ್ದ ಆಡನ್ನು ಸೆರೆಹಿಡಿದು ತಮ್ಮ ವಾಹನದಲ್ಲಿ ಕಚೇರಿ ಆವರಣಕ್ಕೆ ಕೊಂಡೊಯ್ದಿದ್ದಾರೆ.
ಸಾಕುಪ್ರಾಣಿಯನ್ನು ರಸ್ತೆಗೆ ಬಿಟ್ಟು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿದ ಮಾಲೀಕರನ್ನು ಪತ್ತೆಹಚ್ಚಿ ಪಟ್ಟಣ ಪಂಚಾಯತ್ ಅಧಿಕಾರಿಗಳು ದಂಡ ವಿಧಿಸುತ್ತಾರೆಯೇ ಅಥವಾ ಎಚ್ಚರಿಕೆ ನೀಡಿ ಬಿಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
