
ಕಡಬ ತಾಲೂಕಿನ ಮರ್ಧಾಳ ಪಾಲ್ಸ್ ಬಳಿ ಕರ್ತವ್ಯದಲ್ಲಿದ್ದ ಕಡಬ ಠಾಣೆಯ ಹೊಯ್ಸಳ ಪೊಲೀಸರು ರಸ್ತೆಯಲ್ಲಿದ್ದ ಅಪಾಯಕಾರಿ ಗುಂಡಿಗೆ ಕಲ್ಲು ಮಿಶ್ರಿತ ಮಣ್ಣು ಹಾಕಿ ಮುಚ್ಚುವ ಮೂಲಕ ಸಂಭಾವ್ಯ ಅಪಘಾತವನ್ನು ತಪ್ಪಿಸಿದ್ದಾರೆ. ಕೋಸ್ಟಲ್ ರೈಡರ್ ಸೋಷಿಯಲ್ ಮೀಡಿಯಾ ಖಾತೆಯ ವ್ಲಾಗರ್ ಚಿತ್ರೀಕರಿಸಿದ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.


ಕಡಬ / ಮರ್ಧಾಳ:ಕಡಬ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ಅಪಾಯಕಾರಿ ಗುಂಡಿಗಳಿಂದಾಗಿ ಸವಾರರು ಪರದಾಡುವಂತಾಗಿದೆ. ಈ ನಡುವೆ, ಕಡಬ ಪೊಲೀಸ್ ಠಾಣೆಯ ಹೊಯ್ಸಳ ಸಿಬ್ಬಂದಿಗಳು ರಸ್ತೆ ಗುಂಡಿಗೆ ಕಲ್ಲು-ಮಣ್ಣು ಹಾಕಿ ಮುಚ್ಚುವ ಮೂಲಕ ಸಂಭಾವ್ಯ ಅಪಘಾತವನ್ನು ತಪ್ಪಿಸಿದ್ದು, ಪೊಲೀಸರ ಈ ಜನಪರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಖ್ಯಾತ ಸೋಷಿಯಲ್ ಮೀಡಿಯಾ ಖಾತೆ ‘ಕೋಸ್ಟಲ್ ರೈಡರ್’ (Coastal Rider) ಮೂಲಕ ಸಕ್ರಿಯರಾಗಿರುವ ಹೆಸರಾಂತ ವ್ಲಾಗರ್ ಒಬ್ಬರು ಇತ್ತೀಚೆಗೆ ಕಡಬ ತಾಲೂಕಿನ ಮರ್ಧಾಳದ ಪಾಲ್ಸ್ಗೆ (ಜಲಪಾತ) ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕಡಬ ಪೊಲೀಸ್ ಠಾಣೆಯ ಹೊಯ್ಸಳ ವಾಹನದಲ್ಲಿ ಪೊಲೀಸರು ಕರ್ತವ್ಯದಲ್ಲಿದ್ದರು.
ಆ ವೇಳೆ ರಸ್ತೆಯಲ್ಲಿ ಸವಾರರಿಗೆ ಅಪಾಯ ತಂದೊಡ್ಡುವಂತೆ ನಿರ್ಮಾಣವಾಗಿದ್ದ ಗುಂಡಿಯನ್ನು ಗಮನಿಸಿದ ಎ.ಎಸ್.ಐ ಕರುಣಾಕರ ಹಾಗೂ ಅವರ ಜೊತೆಗಿದ್ದ ಸಿಬ್ಬಂದಿಗಳು, ತಕ್ಷಣವೇ ರಸ್ತೆ ಬದಿಯಲ್ಲಿದ್ದ ಕಲ್ಲು ಹಾಗೂ ಮಣ್ಣನ್ನು ತಂದು ಗುಂಡಿಗೆ ಹಾಕಿ ಮುಚ್ಚಿದ್ದಾರೆ.


ಖಾಕಿ ಸಮವಸ್ತ್ರದಲ್ಲಿದ್ದುಕೊಂಡೇ ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸರು ಕೈಗೊಂಡ ಈ ಕಾರ್ಯವನ್ನು ವ್ಲಾಗರ್ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಕಡಬ ಪೊಲೀಸರ ಕರ್ತವ್ಯ ಪ್ರಜ್ಞೆಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
“ಕೇವಲ ಕಾನೂನು ಸುವ್ಯವಸ್ಥೆ ಕಾಯುವುದು ಮಾತ್ರವಲ್ಲದೆ, ಚಾಲಕರು ಹಾಗೂ ಬೈಕ್ ಸವಾರರ ಜೀವ ರಕ್ಷಣೆಗೆ ರಸ್ತೆ ಗುಂಡಿ ಮುಚ್ಚಿದ ಕಡಬ ಪೊಲೀಸರ ಮಾದರಿ ಕಾರ್ಯ ನಿಜಕ್ಕೂ ಶ್ಲಾಘನೀಯ” ಎಂದು ಸಾರ್ವಜನಿಕರು ಹಾಗೂ ವಾಹನ ಚಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
