
ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಪಾರದರ್ಶಕತೆ, ಲೆಕ್ಕಪತ್ರ ಹಾಗೂ ಗುತ್ತಿಗೆ ಪ್ರಕ್ರಿಯೆಗಳ ಕುರಿತು ಮೂಡಿರುವ ಗೊಂದಲಗಳಿಗೆ ಸ್ಪಷ್ಟನೆ ನೀಡಲು ಆಗಸ್ಟ್ 15ರೊಳಗೆ ಸಾರ್ವಜನಿಕ ಸಭೆ ಕರೆಯಬೇಕೆಂದು ಭಕ್ತಾದಿಗಳು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಕಾನತ್ತೂರು ಅವರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ


ಪಂಜ: ಸುಳ್ಯ ತಾಲೂಕಿನ ಪ್ರಸಿದ್ಧ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಕಾರ್ಯವೈಖರಿ, ಆರ್ಥಿಕ ಪಾರದರ್ಶಕತೆ ಹಾಗೂ ಗುತ್ತಿಗೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಮೂಡಿರುವ ಸಂಶಯಗಳಿಗೆ ಸ್ಪಷ್ಟನೆ ನೀಡುವ ಉದ್ದೇಶದಿಂದ ಆಗಸ್ಟ್ 15ರೊಳಗೆ ಸಾರ್ವಜನಿಕ ಸಭೆ ಕರೆಯಬೇಕೆಂದು ಆಗ್ರಹಿಸಿ ಭಕ್ತಾದಿಗಳು ಹಾಗೂ ಗ್ರಾಮಸ್ಥರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಕಾನತ್ತೂರು ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದ್ದಾರೆ.
ದೇವಸ್ಥಾನದ ಪಾವಿತ್ರ್ಯತೆ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡುವ ಹಿತದೃಷ್ಟಿಯಿಂದ ಈ ಮನವಿ ಸಲ್ಲಿಸಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಸಾರ್ವಜನಿಕ ಸಭೆ ನಡೆಸಿ ಉದ್ಭವಿಸಿರುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ಹಾಗೂ ಸ್ಪಷ್ಟನೆ ನೀಡಬೇಕೆಂದು ಮನವಿ ಮಾಡಲಾಗಿದೆ.
ಮನವಿಯಲ್ಲಿ ದಿನನಿತ್ಯದ ಪೂಜಾ ವಿಧಿವಿಧಾನಗಳಲ್ಲಿ ಉಂಟಾಗುತ್ತಿದೆ ಎನ್ನಲಾದ ಲೋಪದೋಷಗಳ ಕುರಿತು ಧಾರ್ಮಿಕ ಸ್ಪಷ್ಟನೆ ನೀಡುವಂತೆ ಕೋರಲಾಗಿದೆ. ಜೊತೆಗೆ ದೇವಸ್ಥಾನದ ಹೆಸರಿನಲ್ಲಿರುವ ಸಾಲ, ಬ್ಯಾಂಕ್ ನಿಶ್ಚಿತ ಠೇವಣಿ (FD), ಉಳಿತಾಯ ಖಾತೆ (SB Account) ಹಾಗೂ ಪ್ರಸ್ತುತ ಹಣಕಾಸು ಲೆಕ್ಕಪತ್ರಗಳ ವಿವರಗಳನ್ನು ಸಾರ್ವಜನಿಕರ ಮುಂದಿಡುವಂತೆ ಆಗ್ರಹಿಸಲಾಗಿದೆ.


ಧಾರ್ಮಿಕ ದತ್ತಿ ಕಾಯ್ದೆಯ ಪ್ರಕಾರ ಜಂಟಿ ಸಹಿ (Joint Signatures) ನಿಯಮಾವಳಿಗಳ ಪಾಲನೆಯ ಬಗ್ಗೆ ಮಾಹಿತಿ ನೀಡಬೇಕು. ಇತ್ತೀಚೆಗೆ ನಡೆದ ಸಿಬ್ಬಂದಿ ತೆರವು ಹಾಗೂ ತೋಟದ ಗುತ್ತಿಗೆ (Lease) ಪ್ರಕ್ರಿಯೆ ಕುರಿತ ಪತ್ರಿಕಾ ಪ್ರಕಟಣೆ ಮತ್ತು ಅದರ ನಿಯಮಾವಳಿಗಳ ಕುರಿತು ಸ್ಪಷ್ಟನೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದಲ್ಲದೆ ಆಡಳಿತ ಮಂಡಳಿಯ ಎಲ್ಲಾ ನಿರ್ಣಯಗಳನ್ನು ಒಮ್ಮತದಿಂದ ತೆಗೆದುಕೊಳ್ಳಲಾಗುತ್ತಿದೆಯೇ ಎಂಬುದರ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.ಆಗಸ್ಟ್ 15ರೊಳಗೆ ದೇವಸ್ಥಾನದ ಆಡಳಿತ ಮಂಡಳಿ ನಿಗದಿತ ದಿನ ಹಾಗೂ ಸಮಯವನ್ನು ಪ್ರಕಟಿಸಿ ಸಾರ್ವಜನಿಕ ಸಭೆ ನಡೆಸಿ ಎಲ್ಲ ಪ್ರಶ್ನೆಗಳಿಗೆ ಸೂಕ್ತ ವಿವರಣೆ ನೀಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ಈ ಮನವಿ ಪತ್ರಕ್ಕೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು ಸೇರಿದಂತೆ ನೂರಾರು ಭಕ್ತಾದಿಗಳು ಹಾಗೂ ಸ್ಥಳೀಯರು ಸಹಿ ಹಾಕಿರುವುದಾಗಿ ತಿಳಿದುಬಂದಿದೆ.
