ಶಾಲಾ ಬಸ್‌ಗಳ ದಾಖಲೆ ಮತ್ತು ಸುರಕ್ಷತಾ ಮಾನದಂಡಗಳ ಪರಿಶೀಲನೆಗೆ ಮುಂದಾದ ಅಧಿಕಾರಿಗಳು

kadaba times

ಕಳೆದ ವಾರ ಬಂಟ್ವಾಳ ತಾಲೂಕಿನ ಬರಿಮಾರ್‌ನಲ್ಲಿ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಶಾಲಾ ವಾಹನದ ಮೇಲೆ ಬೃಹತ್ ಮರ ಬಿದ್ದು ಮಗುವೊಂದು ಮೃತಪಟ್ಟ ದುರ್ಘಟನೆಯ ಬೆನ್ನಲ್ಲೇ ಜಿಲ್ಲಾಡಳಿತ, ಪೊಲೀಸ್ ಹಾಗೂ ಸಾರಿಗೆ ಇಲಾಖೆ (RTO) ತಡವಾಗಿ ಎಚ್ಚೆತ್ತುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ ಬಸ್‌ಗಳ ದಾಖಲೆ ಮತ್ತು ಸುರಕ್ಷತಾ ಮಾನದಂಡಗಳ ಪರಿಶೀಲನೆಗೆ ಅಧಿಕಾರಿಗಳು ಕಣಕ್ಕಿಳಿದಿದ್ದಾರೆ.

kadaba times
uniq

ಈ ಜಂಟಿ ಕಾರ್ಯಾಚರಣೆಯ ಭಾಗವಾಗಿ ಸೋಮವಾರ ಬಿ.ಸಿ.ರೋಡ್ ವೃತ್ತದ ಬಳಿ ಬಂಟ್ವಾಳ ನಗರ ಪೊಲೀಸರು ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಶಾಲಾ ಬಸ್‌ಗಳ ಧಢೀರ್ ತಪಾಸಣೆ ನಡೆಸಿದರು. ಪರಿಶೀಲನೆ ವೇಳೆ ಅಗತ್ಯ ದಾಖಲೆಗಳು ಸಮರ್ಪಕವಾಗಿಲ್ಲದಿರುವುದು ಹಾಗೂ ಸಾರಿಗೆ ನಿಯಮಗಳ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಒಟ್ಟು ನಾಲ್ಕು ಶಾಲಾ ಬಸ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜಪ್ತಿಯಾದ ವಾಹನಗಳಲ್ಲಿ ಮಂಗಳೂರಿನ ಬರಾಕಾ ವಿದ್ಯಾಸಂಸ್ಥೆಗೆ ಸೇರಿದ ಮೂರು ಬಸ್‌ಗಳು ಹಾಗೂ ಬಂಟ್ವಾಳದ ಬಡಕಬೈಲು ಮಜ್ಲಿಸ್ ವಿದ್ಯಾಸಂಸ್ಥೆಗೆ ಸೇರಿದ ಒಂದು ಬಸ್ ಸೇರಿವೆ. ನಿಯಮಾನುಸಾರ ಅಗತ್ಯ ದಾಖಲೆಗಳಿಲ್ಲದ ಕಾರಣ ಈ ಬಸ್‌ಗಳನ್ನು ಮುಂದಿನ ಸೂಕ್ತ ಕ್ರಮಕ್ಕಾಗಿ ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

5 ದಿನಗಳ ಬಳಿಕ ಅಧಿಕಾರಿಗಳು ರಸ್ತೆಗಿಳಿದಿದರು

ತಪಾಸಣೆ ನಡೆಸಿ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹವಾದರೂ, ಈ ಕಾರ್ಯಾಚರಣೆಯ ಸಮಯ ಮತ್ತು ಸಂದರ್ಭವೇ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಶಾಲಾ ಬಾಲಕಿಯೊಬ್ಬಳು  ಜೀವ ಕಳೆದುಕೊಂಡ ಬಂಟ್ವಾಳ ತಾಲೂಕಿನಲ್ಲೇ 5 ದಿನಗಳ ಬಳಿಕ ಅಧಿಕಾರಿಗಳು ರಸ್ತೆಗಿಳಿದಿದ್ದಾರೆ. ಸಾರ್ವಜನಿಕರ ಪ್ರಶ್ನೆಗಳೆಂದರೆ,

kadaba times
kadaba times

ಶಾಲೆ ಆರಂಭವಾಗಿ 2 ತಿಂಗಳಾದರೂ ತಪಾಸಣೆ ಏಕೆ ನಡೆದಿರಲಿಲ್ಲ? ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳು ಕಳೆಯುತ್ತಿದ್ದರೂ ಶಾಲಾ ವಾಹನಗಳ ಫಿಟ್‌ನೆಸ್ (FC), ವಿಮೆ, ಚಾಲನಾ ಪರವಾನಗಿ ಹಾಗೂ ದಾಖಲೆಗಳನ್ನು ಮುಂಚಿತವಾಗಿ ಪರಿಶೀಲಿಸುವುದು ಸಾರಿಗೆ ಇಲಾಖೆಯ ಕರ್ತವ್ಯವಲ್ಲವೇ?. ಬಿ.ಸಿ.ರೋಡ್‌ನ ಒಂದೇ ಜಂಕ್ಷನ್‌ನಲ್ಲಿ ನಡೆಸಿದ ಪರಿಶೀಲನೆಯಲ್ಲೇ 4 ಬಸ್‌ಗಳಲ್ಲಿ ಗಂಭೀರ ಲೋಪಗಳು ಪತ್ತೆಯಾಗಿವೆ ಎಂದರೆ, ಇಷ್ಟು ದಿನಗಳ ಕಾಲ ಈ ವಾಹನಗಳು ಅಪಾಯಕಾರಿ ಸ್ಥಿತಿಯಲ್ಲೇ ನೂರಾರು ಮಕ್ಕಳನ್ನು ದಿನಂಪ್ರತಿ ಕರೆದೊಯ್ಯುತ್ತಿದ್ದವೇ?  “ದುರಂತ ಸಂಭವಿಸುವ ಮುನ್ನವೇ ತಡೆಯಬೇಕಾದ ಆಡಳಿತ ವ್ಯವಸ್ಥೆ, ಮಗು ಮೃತಪಟ್ಟ ಬಳಿಕವಷ್ಟೇ ಕಾರ್ಯಪ್ರವೃತ್ತವಾಗುವುದು ಎಷ್ಟರ ಮಟ್ಟಿಗೆ ಸರಿ?” ಎಂದು ಕಳವಳಕ್ಕೊಳಗಾದ ಪೋಷಕರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಿರಂತರ ಮೇಲ್ವಿಚಾರಣೆ ಅಗತ್ಯ

ಕಲ್ಲಡ್ಕ ಶಾಲಾ ವಾಹನ ದುರಂತದ ಬಳಿಕ ಪರಿಶೀಲನೆ ನಡೆಸಿದಾಗಲೂ ವಿಮೆ ಹಾಗೂ ಎಫ್‌ಸಿ ಇಲ್ಲದಿರುವುದು ಬಯಲಾಗಿ, ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಮತ್ತೆ ನಾಲ್ಕು ಬಸ್‌ಗಳು ಸಿಕ್ಕಿಬಿದ್ದಿರುವುದು ಇಲಾಖೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಅಪಾಯವಾದ ಮೇಲೆ ಕಣ್ಣೀರು ಒರೆಸುವ ಅಥವಾ ಒಂದೆರಡು ದಿನ ಪ್ರದರ್ಶನಕ್ಕಷ್ಟೇ ಕಾರ್ಯಾಚರಣೆ ನಡೆಸುವ ತಾತ್ಕಾಲಿಕ ಕ್ರಮದ ಬದಲಿಗೆ, ಜಿಲ್ಲೆಯಾದ್ಯಂತ ಪ್ರತಿಯೊಂದು ಶಾಲಾ ವಾಹನಗಳ ದಾಖಲೆಗಳನ್ನು ನಿರಂತರ ಮೇಲ್ವಿಚಾರಣೆ ನಡೆಸಬೇಕು. ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡುವ ಶಾಲೆ ಹಾಗೂ ವಾಹನ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದೊಂದೇ ಭವಿಷ್ಯದಲ್ಲಿ ಇಂತಹ ಅನಾಹುತಗಳನ್ನು ತಡೆಯಲು ಸಾಧ್ಯ ಎಂಬುದು ಸಾರ್ವಜನಿಕರ  ಆಗ್ರಹವಾಗಿದೆ.

Related Articles

Latest Articles