
ಕಡಬ: ಕಡಬ ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾಲೇಜು ರಸ್ತೆಯ ಅಡ್ಡಗದ್ದೆ ಎಂಬಲ್ಲಿ ಗುಡ್ಡ ಕುಸಿದು ಬಿದ್ದಿದ್ದು, ಪರಿಣಾಮ ಗುಡ್ಡದ ಮೇಲಿದ್ದ ಬಾಡಿಗೆ ಮನೆಯೊಂದರ ಶೌಚಾಲಯದ ಗುಂಡಿ ಕುಸಿದು ಬಿದ್ದ ಘಟನೆ ಜುಲೈ 23 ರ ಸಂಜೆ ನಡೆದಿದೆ.


ಜೋಸೆಫ್ ಎಂಬವರಿಗೆ ಸೇರಿದ ಈ ಕಟ್ಟಡದಲ್ಲಿ ಒಟ್ಟು ಮೂರು ಬಾಡಿಗೆ ಮನೆಗಳಿದ್ದು, ಅಪಾಯಕಾರಿ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಿವಾಸಿಗಳನ್ನು ತಕ್ಷಣವೇ ಬೇರೆಡೆಗೆ ತೆರಳುವಂತೆ ಸ್ಥಳೀಯ ಆಡಳಿತ ಸೂಚಿಸಿದೆ.ಮಳೆಯ ಪ್ರಮಾಣ ಹೆಚ್ಚಿರುವುದರಿಂದ ಕುಸಿದಿರುವ ಗುಡ್ಡದ ಮಣ್ಣು ಕೆಳಗಿರುವ ಕಟ್ಟಡದ ಮೇಲೆ ಬೀಳುವ ಸಾಧ್ಯತೆಯಿದೆ.
ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ, ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮ್ಮನಾ ಜಬೀನ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಬಾಡಿಗೆ ಮನೆಯ ಕೆಳಭಾಗದಲ್ಲಿ ಅನಧಿಕೃತ ಕಟ್ಟಡ
ಬಾಡಿಗೆ ಮನೆಯ ಕೆಳಭಾಗದಲ್ಲಿ ವ್ಯಕ್ತಿಯೊಬ್ಬರು ಆರಂಭದಲ್ಲಿ ‘ತಡೆಗೋಡೆ’ ನಿರ್ಮಿಸುವುದಾಗಿ ಹೇಳಿ, ತದನಂತರ ಅನಧಿಕೃತವಾಗಿ ಕಟ್ಟಡವನ್ನೇ ನಿರ್ಮಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾಲೀಕರಿಗೆ ಈಗಾಗಲೇ ಪಟ್ಟಣ ಪಂಚಾಯತ್ನಿಂದ ಮೂರು ಬಾರಿ ನೋಟಿಸ್ ನೀಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಅಧಿಕಾರಿಗಳ ಕಣ್ಣೆದುರೇ ನಿಯಮ ಉಲ್ಲಂಘಿಸಿ ಅನಧಿಕೃತ ಕಟ್ಟಡ ತಲೆಎತ್ತುತ್ತಿದ್ದರೂ ಸೂಕ್ತ ಸಮಯಕ್ಕೆ ಕ್ರಮ ಕೈಗೊಳ್ಳದಿರುವುದೇ ಇರುವುದರ ಇಂದಿನ ಉದ್ದೇಶವೇನು ಎಂದು ಸ್ಥಳೀಯ ಸಾರ್ವಜನಿಕರು ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
