
ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಾರ್ವಜನಿಕರ ದಶಕಗಳ ಕನಸಾದ ಕೊರಿಯಾರ್ ಸೇತುವೆ ನಿರ್ಮಾಣಕ್ಕೆ ಕೊನೆಗೂ ಚಾಲನೆ ದೊರಕಿದೆ. ಕಡಬ ತಾಲೂಕಿನ ನೆಕ್ಕಿಲಾಡಿ ಗ್ರಾಮ ಹಾಗೂ ಬಳ್ಪವನ್ನು ಸಂಪರ್ಕಿಸುವ ಈ ಸೇತುವೆಗೆ ಸರ್ಕಾರ ₹30 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಬುಧವಾರ ಸ್ಥಳದಲ್ಲಿ ಸರ್ವೆ ಕಾರ್ಯ ಆರಂಭವಾಗಿದೆ.


ಕಡಬ: ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರ ಹಾಗೂ ಯಾತ್ರಾರ್ಥಿಗಳ ದಶಕಗಳ ಬಹುದೊಡ್ಡ ಕನಸಾಗಿದ್ದ ಕೊರಿಯಾರ್ ಸೇತುವೆ ನಿರ್ಮಾಣಕ್ಕೆ ಮುಹೂರ್ತ ಸಿಕಿದ್ದು , ಯೋಜನೆ ಅನುಷ್ಠಾನದ ಪ್ರಮುಖ ಹಂತವಾಗಿ ಬುಧವಾರ ಸ್ಥಳದಲ್ಲೇ ಅಧಿಕೃತ ಸರ್ವೆ ಕಾರ್ಯ ಆರಂಭಗೊಂಡಿದೆ.
ಕಡಬ ತಾಲೂಕಿನ ನೆಕ್ಕಿಲಾಡಿ ಗ್ರಾಮ ಹಾಗೂ ಬಳ್ಪ ಆದರ್ಶ ಗ್ರಾಮವನ್ನು ಸಂಪರ್ಕಿಸುವ ಪ್ರಮುಖ ಸೇತುವೆ ನಿರ್ಮಾಣ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ಬರೋಬ್ಬರಿ 3,000 ಲಕ್ಷ ರೂ. (30 ಕೋಟಿ ರೂ.) ಅಂದಾಜು ಮೊತ್ತದ ಬಂಡವಾಳ ವೆಚ್ಚಕ್ಕೆ ಸರ್ಕಾರ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿತ್ತು.
ಹಲವು ವರ್ಷಗಳಿಂದ ಸಾರ್ವಜನಿಕರ ಪ್ರಮುಖ ಬೇಡಿಕೆಯಾಗಿದ್ದ ಕೊರಿಯಾರ್ ಸೇತುವೆ ನಿರ್ಮಾಣ ಕಾಮಗಾರಿಯನ್ನು ತುರ್ತಾಗಿ ಕೈಗೊಳ್ಳುವಂತೆ ಶ್ರೀ ಕೃಷ್ಣಪ್ಪ ಜಿ. ಅವರು ಲೋಕೋಪಯೋಗಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದ್ದರು. ಈ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವರು, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರು. ಸಚಿವರ ಆದೇಶದ ಮೇರೆಗೆ ಇದೀಗ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳ ತಂಡ ಸರ್ವೆ ಕಾರ್ಯಕ್ಕೆ ಚಾಲನೆ ನೀಡಿದೆ.


KRDCL ನಿಧಿಯಿಂದ ₹30 ಕೋಟಿ ಅನುದಾನ:
ರಾಜ್ಯ ಸರ್ಕಾರದ ಆಯವ್ಯಯ ಘೋಷಣೆಯ ಮುಂದುವರಿದ ಯೋಜನೆಯ ಭಾಗವಾಗಿ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ (KRDCL) ಬಂಡವಾಳ ವೆಚ್ಚದ ಲೆಕ್ಕಶೀರ್ಷಿಕೆಯಡಿ ಈ ಬೃಹತ್ ಮೊತ್ತವನ್ನು ಒದಗಿಸಲಾಗಿದೆ. ಈ ಸಂಬಂಧ ಲೋಕೋಪಯೋಗಿ ಇಲಾಖೆಯ ಆಂತರಿಕ ಆರ್ಥಿಕ ಸಲಹೆಗಾರರಾದ ಡಾ. ಸೋಮನಾಥ ಅವರು ಅಧಿಕೃತ ಆದೇಶ ಹೊರಡಿಸಿದ್ದು, ಇಲಾಖೆಯ ನಿಯಮಾವಳಿಗಳ ಪ್ರಕಾರ ಪಾರದರ್ಶಕ ಟೆಂಡರ್ ಪ್ರಕ್ರಿಯೆಯ ಮೂಲಕ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ.
ಸ್ಥಳಕ್ಕೆ ಮುಖಂಡರು & ಹೋರಾಟಗಾರರ ಭೇಟಿ:
ಬುಧವಾರ ಆರಂಭಗೊಂಡ ಸರ್ವೆ ಕಾರ್ಯದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ವಿಜಯಕುಮಾರ್ ರೈ, ಕಿಸಾನ್ ಘಟಕದ ಭವಾನಿ ಶಂಕರ ಮೇಲಂಟ, ಈರೇಶ್ ಗೌಡ, ಶರತ್ ಕೆರ್ಮಾಯಿ ಹಾಗೂ ಸೇತುವೆ ನಿರ್ಮಾಣ ಹೋರಾಟಗಾರರಾದ ಸರ್ವೋತ್ತಮ ಗೌಡ ಪಂಜೋಡಿ, ಹರೀಶ್ ಕೋರಿಯರ್ ಮತ್ತು ರಾಮಚಂದ್ರ ಗೌಡ ಸಾರಾಕೆರೆ ಅವರು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳು ನಡೆಸುತ್ತಿದ್ದ ಸರ್ವೆ ಕಾರ್ಯವನ್ನು ವೀಕ್ಷಿಸಿ, ಪರಿಶೀಲನೆ ನಡೆಸಿದರು.
