
ಕಡಬ: ಖಾಸಗಿ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ, ಹುಲ್ಲು ಕತ್ತರಿಸುವ ಯಂತ್ರದ ಮೂಲಕ ಹಣ್ಣಿನ ಹಾಗೂ ಔಷಧೀಯ ಗಿಡಗಳನ್ನು ನಾಶಪಡಿಸಿ ನಷ್ಟ ಉಂಟುಮಾಡಿರುವ ಆರೋಪದ ಮೇರೆಗೆ ಬಿಳಿನೆಲೆ ಗ್ರಾಮದ ವ್ಯಕ್ತಿಯ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ಸಂಬಂಧ ಬಿಳಿನೆಲೆ ಗ್ರಾಮದ ಗೋಪಾಳಿ ನಿವಾಸಿ ಹರಿಪ್ರಸಾದ್ ಜಿ. ಎಂಬವರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿದೆ.
ಬಿಳಿನೆಲೆ ಗ್ರಾಮದ ಗೋಪಾಳಿ ನಿವಾಸಿ ಶ್ರೀಮತಿ ರುಕ್ಕಿಣಿ ಎಂಬವರು ನೀಡಿರುವ ದೂರಿನ ಪ್ರಕಾರ, ಜುಲೈ 19ರಂದು ತಮ್ಮ ಮಗನ ಜೊತೆ ಇದ್ದರು. ಜಮೀನಿನ ಸರ್ವೆ ನಂಬ್ರ 128/4ಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪಿ ಜಮೀನಿನಲ್ಲಿದ್ದ ಹಲಸಿನ ಗಿಡ, ಮಾವಿನ ಗಿಡ ಹಾಗೂ ಹಲವು ಔಷಧೀಯ ಗಿಡಗಳನ್ನು ಹುಲ್ಲು ಕತ್ತರಿಸುವ ಯಂತ್ರದಿಂದ (Grass Cutter) ಕತ್ತರಿಸಿ ನಾಶಪಡಿಸಿದ್ದಾರೆ. ಇದರಿಂದ ಸುಮಾರು ₹5,000ಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


ಅಕ್ರಮ ಪ್ರವೇಶ ಹಾಗೂ ಗಿಡಗಳನ್ನು ನಾಶಪಡಿಸಿ ನಷ್ಟ ಉಂಟುಮಾಡಿದ ಆರೋಪದ ಮೇಲೆ ರುಕ್ಕಿಣಿ ಅವರು ನೀಡಿದ ಬಖೈರು ದೂರಿನಂತೆ, ಕಡಬ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS), 2023ರ ಕಲಂ 324(3) ಹಾಗೂ 329(4) ರ ಅಡಿಯಲ್ಲಿ ಅಪರಾಧ ಸಂಖ್ಯೆ 93/2026 ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
