
ಕಡಬ: ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರ ಹಾಗೂ ಯಾತ್ರಾರ್ಥಿಗಳ ದಶಕಗಳ ಬಹುದೊಡ್ಡ ಕನಸೊಂದಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಕಡಬ ತಾಲೂಕಿನ ನೆಕ್ಕಿಲಾಡಿ ಗ್ರಾಮ ಹಾಗೂ ಬಳ್ಳ ಆದರ್ಶವನ್ನು ಸಂಪರ್ಕಿಸುವ ಪ್ರಮುಖ ಸೇತುವೆ ನಿರ್ಮಾಣ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ಬರೋಬ್ಬರಿ 3,000 ಲಕ್ಷ ರೂ. (30 ಕೋಟಿ ರೂ.) ಅಂದಾಜು ಮೊತ್ತದ ಬಂಡವಾಳ ವೆಚ್ಚಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.


ರಾಜ್ಯ ಸರ್ಕಾರದ ಆಯವ್ಯಯ ಘೋಷಣೆಯ ಮುಂದುವರಿದ ಯೋಜನೆಯ ಭಾಗವಾಗಿ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ (KRDCL) ಬಂಡವಾಳ ವೆಚ್ಚದ ಲೆಕ್ಕಶೀರ್ಷಿಕೆಯಡಿ ಈ ಬೃಹತ್ ಮೊತ್ತವನ್ನು ಒದಗಿಸಲಾಗಿದ್ದು, ಲೋಕೋಪಯೋಗಿ ಇಲಾಖೆಯ ನಿಯಮಾವಳಿಗಳ ಪ್ರಕಾರ ಪಾರದರ್ಶಕ ಟೆಂಡರ್ ಪ್ರಕ್ರಿಯೆಯ ಮೂಲಕ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಆದೇಶಿಸಿದೆ.ರಾಜ್ಯ ಸರ್ಕಾರದ ಆಯವ್ಯಯ ಘೋಷಣೆಯ ಮುಂದುವರಿದ ಯೋಜನೆಯ ಭಾಗವಾಗಿ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ (KRDCL) ಬಂಡವಾಳ ವೆಚ್ಚದ ಲೆಕ್ಕಶೀರ್ಷಿಕೆಯಡಿ ಈ ಬೃಹತ್ ಮೊತ್ತವನ್ನು ಒದಗಿಸಿ ಲೋಕೋಪಯೋಗಿ ಇಲಾಖೆಯ ಆಂತರಿಕ ಆರ್ಥಿಕ ಸಲಹೆಗಾರರಾದ ಡಾ. ಸೋಮನಾಥ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಮಾಜಿ ಸಚಿವ ಎಸ್. ಅಂಗಾರ ಪ್ರಯತ್ನ: ಈ ಭಾಗದಲ್ಲಿ ಸುಸಜ್ಜಿತ ಸೇತುವೆ ನಿರ್ಮಾಣವಾಗಬೇಕೆಂದು ಅಂದಿನ ಸುಳ್ಯ ಶಾಸಕ ಹಾಗೂ ಸಚಿವರಾಗಿದ್ದ ಎಸ್. ಅಂಗಾರ ಅವರ ಮುಖಾಂತರ ಸರ್ಕಾರಕ್ಕೆ ವಿಶೇಷ ಮನವಿ ಸಲ್ಲಿಸಿ ನಿರಂತರ ಒತ್ತಡ ಹೇರಲಾಗಿತ್ತು. ಅವರ ಮುತುವರ್ಜಿಯ ಫಲವಾಗಿ ಪ್ರಸ್ತುತ ಈ ಬೃಹತ್ ಮೊತ್ತದ ಯೋಜನೆಗೆ ಚಾಲನೆ ಸಿಕ್ಕಂತಾಗಿದೆ.
ಕಡಬ ತಾಲೂಕು ಅಭಿವೃದ್ಧಿಗೆ ಪೂರಕ: ಮುಖ್ಯವಾಗಿ ನೂತನ ತಾಲೂಕು ಕೇಂದ್ರವಾಗಿ ಅನುಷ್ಠಾನಗೊಳ್ಳುತ್ತಿರುವ ಕಡಬ ತಾಲೂಕಿಗೆ ಒಳಪಡುವ ವಿವಿಧ ಗ್ರಾಮೀಣ ಭಾಗಗಳ ಸಂಪರ್ಕಕ್ಕೆ ಈ ಸೇತುವೆ ಪೂರಕ ವಾತಾವರಣ ನಿರ್ಮಿಸಲಿದೆ. ತಾಲೂಕು ಕೇಂದ್ರದ ವ್ಯಾಪ್ತಿಯ ಗ್ರಾಮಗಳ ನಡುವೆ ಸುಲಭ ಸಂಪರ್ಕ ಕಲ್ಪಿಸಲು ಇದು ಸಹಕಾರಿಯಾಗಲಿದೆ.


ಮಡಿಕೇರಿ – ಧರ್ಮಸ್ಥಳಕ್ಕೆ ನೇರ ಸಂಪರ್ಕ; 45 ಕಿ.ಮೀ ದೂರ ಕಡಿಮೆ! ಈ ಸೇತುವೆ ನಿರ್ಮಾಣವಾದಲ್ಲಿ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಸಂಪರ್ಕಿಸುವ ಪ್ರವಾಸಿಗರಿಗೆ ಭಾರಿ ಅನುಕೂಲವಾಗಲಿದೆ. ಮಡಿಕೇರಿಯಿಂದ ಧರ್ಮಸ್ಥಳಕ್ಕೆ ನೇರ ಸಂಪರ್ಕ ಕಲ್ಪಿಸಿದಂತಾಗಲಿದ್ದು, ಯಾತ್ರಾರ್ಥಿಗಳಿಗೆ ಬರೋಬ್ಬರಿ 45 ಕಿಲೋ ಮೀಟರ್ಗಳಷ್ಟು ಸಂಚಾರ ದೂರ ಉಳಿತಾಯವಾಗಲಿದೆ.
ಯಾತ್ರಾರ್ಥಿಗಳು ಇನ್ನು ಮುಂದೆ ಮಡಿಕೇರಿ, ಸಂಪಾಜೆ, ಮರ್ಕಂಜ, ಇಳಿಮಲೆ, ಗುತ್ತಿಗಾರು, ಬಳ್ಪ, ಕೋರಿಯಾರ್, ಮರ್ಧಾಳ, ಪೆರಿಯಶಾಂತಿ ಮುಖಾಂತರ ಅತ್ಯಂತ ಸುಲಭವಾಗಿ ಧರ್ಮಸ್ಥಳವನ್ನು ತಲುಪಬಹುದಾಗಿದೆ.ಈ ಸೇತುವೆ ನಿರ್ಮಾಣದಿಂದಾಗಿ ಕಡಬ ತಾಲೂಕಿನ ನೆಕ್ಕಿಲಾಡಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರಿಗೆ ಸುಲಭ ಸಂಪರ್ಕ ಕಲ್ಪಿಸಲು ಸಾಧ್ಯವಾಗಲಿದ್ದು, ಈ ಭಾಗದ ಸುದೀರ್ಘ ಕಾಲದ ಮೂಲಸೌಕರ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.
