
ಕಡಬ: ಪತ್ರಕರ್ತರು ತಮ್ಮ ದಿನನಿತ್ಯದ ವೃತ್ತಿಪರ ಕರ್ತವ್ಯಗಳ ಒತ್ತಡದ ನಡುವೆಯೂ ಸಾರ್ವಜನಿಕರ ಅನುಕೂಲಕ್ಕಾಗಿ ಇಂತಹ ಜನಪರ ಶಿಬಿರಗಳನ್ನು ಆಯೋಜಿಸುತ್ತಿರುವುದು ಅತ್ಯಂತ ಹೆಮ್ಮೆಯ ಮತ್ತು ಶ್ಲಾಘನೀಯ ವಿಷಯವಾಗಿದೆ ಎಂದು ಕಡಬ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬಿನ್ ಅವರು ತಿಳಿಸಿದರು.


ಸೋಮವಾರ ಕಡಬದ ಪ್ರೆಸ್ ಕ್ಲಬ್ ಕಚೇರಿಯಲ್ಲಿ ಕಡಬ ತಾಲೂಕು ಪತ್ರಕರ್ತರ ಸಂಘದ ನೇತೃತ್ವದಲ್ಲಿ, ರಾಜ್ಯದ ಪ್ರಸಿದ್ಧ ಸಮಾಜ ಸೇವಾ ಸಂಸ್ಥೆಯಾದ ‘ಟೀಮ್ ಈಶ್ವರ್ ಮಲ್ಪೆ’ ಟ್ರಸ್ಟ್ನ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ “ಉಚಿತ ಕಿವಿಯ ಶ್ರವಣ ತಪಾಸಣೆ, ಶ್ರವಣ ಯಂತ್ರಕ್ಕೆ ಸಹಾಯಧನ ಹಾಗೂ ವಿತರಣಾ ಕಾರ್ಯಕ್ರಮ”ವನ್ನು ದೀಪ ಬೆಳಗಿಸಿ ಅಧಿಕೃತವಾಗಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ತಾಲೂಕು ಪತ್ರಕರ್ತರ ಸಂಘವು ಉಚಿತ ಕಿವಿಯ ಶ್ರವಣ ತಪಾಸಣೆ ಹಾಗೂ ಶ್ರವಣ ಯಂತ್ರಕ್ಕೆ ಸಹಾಯಧನ ನೀಡುವ ಮೂಲಕ ಸಮಾಜಕ್ಕೆ ಅತ್ಯಂತ ಮಾದರಿಯಾದ ಕೆಲಸವನ್ನು ಮಾಡುತ್ತಿದೆ ಎಂದು ಅವರು ಪ್ರಶಂಸಿಸಿದರಲ್ಲದೆ, “ನಮ್ಮ ಭಾಗದಲ್ಲಿ ಸಾಧಾರಣವಾಗಿ ಬೇರೆ ಎಲ್ಲಾ ರೀತಿಯ ಆರೋಗ್ಯ ಶಿಬಿರಗಳು ನಿಯಮಿತವಾಗಿ ನಡೆಯುತ್ತವೆ. ಆದರೆ ಕಿವಿಯ ತಪಾಸಣೆಗೆ ಸಂಬಂಧಿಸಿದ ವಿಶೇಷ ಶಿಬಿರಗಳು ನಡೆಯುವುದು ಬಹಳ ಅಪರೂಪ. ಇಂತಹ ವಿಶಿಷ್ಟ ಶಿಬಿರಗಳಿಂದ ಗ್ರಾಮೀಣ ಭಾಗದ ಮಧ್ಯಮ ಹಾಗೂ ಬಡವರ್ಗದ ಜನರಿಗೆ ಆರ್ಥಿಕವಾಗಿ ಮತ್ತು ಆರೋಗ್ಯದ ದೃಷ್ಟಿಯಿಂದ ತುಂಬಾ ಅನುಕೂಲವಾಗುತ್ತದೆ. ಕಡಬದಲ್ಲಿ ಈ ಶಿಬಿರವನ್ನು ಕೇವಲ ಒಂದು ಬಾರಿಗೆ ಸೀಮಿತಗೊಳಿಸದೆ ಪ್ರತೀ ತಿಂಗಳೂ ನಡೆಸುವಂತಾಗಬೇಕು. ಈ ನಿಟ್ಟಿನಲ್ಲಿನಮ್ಮ ಸಂಪೂರ್ಣ ಸಹಕಾರ ಮತ್ತು ಬೆಂಬಲ ಸದಾ ಇರಲಿದೆ” ಎಂದು ತಮನ್ನಾ ಜಬಿನ್ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಟೀಮ್ ಈಶ್ವರ ಮಲ್ಪೆ ಟ್ರಸ್ಟ್ನ ಸಂಯೋಜಕ ಲವ ಬಂಗೇರ ಅವರು, ಕಡಬದಲ್ಲಿ ನಡೆಯುತ್ತಿರುವ ಈ ಶಿಬಿರವು ನಮ್ಮ ಸರಣಿಯ 121ನೇ ಶಿಬಿರವಾಗಿದ್ದು, ಈಗಾಗಲೇ ರಾಜ್ಯದಾದ್ಯಂತ ಸಾವಿರಾರು ಬಡ ಸಾರ್ವಜನಿಕರು ಇದರ ನೇರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ” ಎಂದು ಮಾಹಿತಿ ನೀಡಿದರು.


ಶಿಬಿರದಲ್ಲಿ ಸಾರ್ವಜನಿಕರ ತಪಾಸಣೆ ನಡೆಸಿ ಮಾತನಾಡಿದ ಟೀಮ್ ಈಶ್ವರ ಮಲ್ಪೆಯ ಮುಖ್ಯ ತಜ್ಞ ವೈದ್ಯ ಡಾ. ಪವನ್ ಅವರು ಕಿವಿಯ ಸುರಕ್ಷತೆಯ ಬಗ್ಗೆ ಮಹತ್ವದ ಮಾಹಿತಿ ನೀಡಿದರು. ಬಹುತೇಕ ಶ್ರವಣ ದೋಷಗಳು ಒಳಗಿವಿಯ ನರಗಳ ದೋಷದಿಂದ ಉಂಟಾಗುತ್ತವೆ. ಕಿವಿಯ ಸಮಸ್ಯೆ ತೀವ್ರವಾಗಿ ಉಲ್ಭಣಗೊಳ್ಳುವ ಮುನ್ನವೇ ಸೂಕ್ತ ಸಮಯದಲ್ಲಿ ವೈದ್ಯಕೀಯ ತಪಾಸಣೆ ನಡೆಸಿ, ಸರಿಯಾದ ಚಿಕಿತ್ಸೆ ಅಥವಾ ಶ್ರವಣ ಯಂತ್ರ ಅಳವಡಿಸಿಕೊಂಡರೆ ಶ್ರವಣ ದೋಷವನ್ನು ಯಶಸ್ವಿಯಾಗಿ ನಿಯಂತ್ರಿಸಬಹುದು” ಎಂದು ಕಿವಿ ಆರೋಗ್ಯದ ಬಗ್ಗೆ ನಿಗಾವಹಿಸಲು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್. ಬಾಲಕೃಷ್ಣ ಕೊಯಿಲ ಅವರು ಮಾತನಾಡಿ, ಕಡಬ ತಾಲೂಕು ಪತ್ರಕರ್ತರ ಸಂಘವು ಕೇವಲ ಪತ್ರಕರ್ತರ ವೃತ್ತಿಪರ ಶ್ರೇಯೋಭಿವೃದ್ಧಿಗಷ್ಟೇ ಸೀಮಿತವಾಗಿರದೆ, ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯಲ್ಲೇ ಒಂದು ವೈಶಿಷ್ಟ್ಯಪೂರ್ಣ ಸಂಘಟನೆಯಾಗಿ ಬೆಳೆದು ಬಂದಿದೆ” ಎಂದರು.
ಈ ವೇಳೆ ಕಡಬ ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು ಫಲಾನುಭವಿಗಳಿಗೆ ನೆರವಾದರು. ಸಂಘದ ನಿಕಟಪೂರ್ವ ಅಧ್ಯಕ್ಷ ನಾಗರಾಜ್ ಎನ್.ಕೆ. ನಿರೂಪಿಸಿದರು. ಕಡಬ ಹಾಗೂ ಸುತ್ತಮುತ್ತಲಿನ ನೂರಾರು ಗ್ರಾಮೀಣ ಜನತೆ ಶಿಬಿರದ ಸದುಪಯೋಗ ಪಡೆದುಕೊಂಡರು.
