ಕಡಬ: ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮತಯಂತ್ರದ ಮೂಲಕ ವಿದ್ಯಾರ್ಥಿ ಸಂಘದ ಚುನಾವಣೆ

kadaba times

ಕಡಬ: ಇಲ್ಲಿನ ಹನುಮಾನ್ ನಗರದ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2026-27ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯು ಯಶಸ್ವಿಯಾಗಿ ಜರುಗಿತು. ಶಾಲಾ ಹಂತದಲ್ಲೇ ಪ್ರಜಾಪ್ರಭುತ್ವದ ಚುನಾವಣಾ ಪ್ರಕ್ರಿಯೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಬಾರಿಯ ಚುನಾವಣೆಯನ್ನು ಆಧುನಿಕ ‘ಇಗಿಒ'(EVM) ಮತಯಂತ್ರದ ಮೂಲಕ ನಡೆಸಿರುವುದು ವಿಶೇಷವಾಗಿತ್ತು.

kadaba times
uniq

ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಸಂಸ್ಥೆಯ ಮುಖ್ಯಗುರುಗಳಾದ ವಸಂತ ಕೆ. ಇವರು, ವಿದ್ಯಾರ್ಥಿಗಳಿಗೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ಮತದಾನದ ಹಕ್ಕು ಹಾಗೂ ಇಗಿಒ ಮತಯಂತ್ರವು ಹೇಗೆ ಕೆಲಸ ಮಾಡುತ್ತದೆ ಎಂಬುದರ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿ, ಜಾಗೃತಿ ಮೂಡಿಸಿದರು.

ಪ್ರಸಕ್ತ ಸಾಲಿನ ಶಾಲಾ ವಿದ್ಯಾರ್ಥಿ ಸಂಘದ ನಾಯಕತ್ವಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅತ್ಯಂತ ಪ್ರತಿಷ್ಠಿತ ಶಾಲಾ ನಾಯಕ (SPL) ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದರೆ, ಶಾಲಾ ಉಪನಾಯಕ (ASPL) ಸ್ಥಾನಕ್ಕೆ ನಾಲ್ಕು ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.

ಮತದಾನ ಪ್ರಕ್ರಿಯೆ ಮುಗಿದ ನಂತರ ಅತ್ಯಂತ ಪಾರದರ್ಶಕವಾಗಿ ಮತ ಎಣಿಕೆ ಕಾರ್ಯ ನಡೆಯಿತು. ಮತ ಎಣಿಕೆಯ ಅಂತ್ಯದಲ್ಲಿ ಶಾಲಾ ನಾಯಕನಾಗಿ 10ನೇ ತರಗತಿಯ ವಿದ್ಯಾರ್ಥಿ ಚಂದ್ರಮೌಳಿ ಬಿ. ಹಾಗೂ ಶಾಲಾ ಉಪನಾಯಕಿಯಾಗಿ 9ನೇ ತರಗತಿಯ ವಿದ್ಯಾರ್ಥಿನಿ ಜಿ. ಶಾರ್ವರಿ ಬನ್ನಿಂತ್ತಾಯ ಅವರು ಭರ್ಜರಿ ಬಹುಮತದೊಂದಿಗೆ ವಿಜಯಶಾಲಿಯಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಲಾಯಿತು.

kadaba times
kadaba times

ಇಡೀ ಚುನಾವಣಾ ಪ್ರಕ್ರಿಯೆಯನ್ನು ಶಾಲೆಯ ಸಹಶಿಕ್ಷಕಿ ಶ್ರೀಮತಿ ಸುಮಂಗಲಾ ಎ. ಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಸತೀಶ್ಚಂದ್ರ ಕೆ. ಅವರು ಚುನಾವಣಾಧಿಕಾರಿಗಳಾಗಿ ಯಶಸ್ವಿಯಾಗಿ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸಂಸ್ಥೆಯ ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದು, ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರುಗಳಿಗೆ ಶಾಲೆಯ ಶಿಸ್ತು ಮತ್ತು ಘನತೆಯನ್ನು ಎತ್ತಿಹಿಡಿಯುವಂತೆ ಹಾರೈಸಿ, ಅಭಿನಂದನೆ ಸಲ್ಲಿಸಿದರು.

Related Articles

Latest Articles