
ಬೆಳ್ತಂಗಡಿ: ಇಲ್ಲಿನ ಗುರುವಾಯನಕೆರೆ ಸಮೀಪದ ಅಲಾದಿಕೊಟ್ಟಿಗೆಯ ಶ್ರೀದೇವಿ ಕಾಂಪ್ಲೆಕ್ಸ್ ಆವರಣದಲ್ಲಿ ಪೆರ್ನೆ ನಿವಾಸಿ ಯತೀಶ್ ಗೌಡ (32) ಎಂಬವರ ಮೃತದೇಹ ಅಸಹಜ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಇದೀಗ ಭಾರೀ ತಿರುವು ಸಿಕ್ಕಿದೆ. ಇದು ಕೇವಲ ಅಸಹಜ ಸಾವಲ್ಲ, ಬದಲಿಗೆ ಭೀಕರ ಕೊಲೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.


ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಮೂವರನ್ನು ಬಂಧಿಸಿದ್ದು, ಆರೋಪಿಗಳನ್ನು ಯಶೋಧರ (35) – ಮಿತ್ತಬಾಗಿಲು ನಿವಾಸಿ, ಬೆಳ್ತಂಗಡಿ ತಾಲೂಕು,ಮೋಹನ್ (30) – ಚಾರ್ವಾಕ ನಿವಾಸಿ, ಕಡಬ ತಾಲೂಕು.ಇಬ್ರಾಹಿಂ (54) – ಪಡಂಗಡಿ ನಿವಾಸಿ ಎಂದು ಗುರುತಿಸಲಾಗಿದೆ್.
ಬೆಳಿಗ್ಗೆ ಯತೀಶ್ ಗೌಡ ಅವರ ಮೃತದೇಹ ಶ್ರೀದೇವಿ ಕಾಂಪ್ಲೆಕ್ಸ್ ಆವರಣದಲ್ಲಿ ಪತ್ತೆಯಾದಾಗ ಸಾರ್ವಜನಿಕರಲ್ಲಿ ಹಲವು ಅನುಮಾನಗಳು ಮೂಡಿದ್ದವು. ಮೃತರ ಸಹೋದರ ನೀಡಿದ ದೂರಿನನ್ವಯ ಕಾರ್ಯಪ್ರವೃತ್ತರಾದ ಬೆಳ್ತಂಗಡಿ ಪೊಲೀಸರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದರು.
ಸ್ಥಳದಲ್ಲಿದ್ದ ಸಿಸಿಟಿವಿ (CCTV) ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೊಲೆಯ ಭೀಕರ ದೃಶ್ಯ ಬೆಳಕಿಗೆ ಬಂದಿದೆ. ಇಂದು ಬೆಳಿಗ್ಗೆ ಆರೋಪಿಗಳಾದ ಯಶೋಧರ, ಮೋಹನ್ ಹಾಗೂ ಇಬ್ರಾಹಿಂ ಸೇರಿಕೊಂಡು ಯತೀಶ್ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಹಲ್ಲೆಯ ಪರಿಣಾಮವಾಗಿಯೇ ಯತೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.


ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ
ಪ್ರಕರಣದ ಗಂಭೀರತೆಯನ್ನು ಅರಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಅರುಣ್ ಕುಮಾರ್, ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಭೂಮ ರೆಡ್ಡಿ, ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿನಿ ಸಿ.ಕೆ., ಮತ್ತು ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಸಿಕಂದರ್ ಪಾಷ ಹಾಗೂ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರ (SOCO) ತಂಡ ಕೂಡ ಆಗಮಿಸಿದ್ದು, ಅಗತ್ಯ ಸಾಕ್ಷ್ಯಗಳನ್ನು ಕಲೆಹಾಕಿದೆ. ಸಿಸಿಟಿವಿ ಸಾಕ್ಷ್ಯ ಸಿಕ್ಕ ತಕ್ಷಣವೇ ಅಲರ್ಟ್ ಆದ ಪೊಲೀಸರು ಕೆಲವೇ ಗಂಟೆಗಳಲ್ಲಿ ಮೂವರೂ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಗೆ ನಿಖರವಾದ ಕಾರಣ ಏನೆಂಬುದರ ಕುರಿತು ಪೊಲೀಸರು ಸದ್ಯ ತನಿಖೆ ಮುಂದುವರಿಸಿದ್ದಾರೆ.
