ಕಡಬ: ರುದ್ರಭೂಮಿಯಲ್ಲಿ ಅರೆಬೆಂದ ಸ್ಥಿತಿಯಲ್ಲೇ ಶವ ಬಿಟ್ಟು ಹೋದ ಸಂಬಂಧಿಕರು

kadaba times

ಕಡಬ: ಇಲ್ಲಿನ ಕಲ್ಲಂತಡ್ಕದಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಶವ ಸಂಸ್ಕಾರಕ್ಕೆ ಬಂದವರು ಮೃತದೇಹ ಪೂರ್ಣವಾಗಿ ಬೂದಿಯಾಗುವ ಮುನ್ನವೇ ಸ್ಥಳದಿಂದ ತೆರಳಿದ್ದು, ಇದರಿಂದಾಗಿ ಅರೆಬೆಂದ ಶವದಿಂದ ತೀವ್ರ ದುರ್ವಾಸನೆ ಹರಡಿ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ಹೊರಹಾಕಿದ ಘಟನೆ ಮೇ 27ರ ರಾತ್ರಿ ನಡೆದಿದೆ.

kadaba times
uniq

ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮೂರಾಜೆ ವಾರ್ಡಿನ ಹಿರಿಯ ಮಹಿಳೆಯೊಬ್ಬರು ಇತ್ತೀಚೆಗೆ ನಿಧನರಾಗಿದ್ದರು. ಅವರ ಸಂಬಂಧಿಕರು ಕೋಡಿಂಬಾಳ ಗ್ರಾಮದ ಕಲ್ಲಂತಡ್ಕದಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಮೇ 27ರ ಮಧ್ಯಾಹ್ನ ಶವ ಸಂಸ್ಕಾರ ನೆರವೇರಿಸಿದ್ದರು. ಆದರೆ, ಮೃತದೇಹ ಪೂರ್ಣ ಪ್ರಮಾಣದಲ್ಲಿ ಸುಟ್ಟು ಭಸ್ಮವಾಗುವ ಮುನ್ನವೇ ಕುಟುಂಬಸ್ಥರು ಹಾಗೂ ಚಿತೆಗೆ ಅಗ್ನಿ ಸ್ಪರ್ಶ ಮಾಡಿದವರು ಅಲ್ಲಿಂದ ನಿರ್ಗಮಿಸಿದ್ದಾರೆ ಎನ್ನಲಾಗಿದೆ.

 

ದುರ್ವಾಸನೆಗೆ ಬೇಸತ್ತ ಜನ: ಮಧ್ಯಾಹ್ನ ನಡೆದ ಶವ ಸಂಸ್ಕಾರದ ಬಳಿಕ ರಾತ್ರಿಯಾಗುತ್ತಿದ್ದಂತೆ ಸುತ್ತಮುತ್ತಲಿನ ಮನೆಗಳಿಗೆ ಕರಕಲು ವಾಸನೆತೀವ್ರವಾಗಿ ಹರಡಲು ಆರಂಭಿಸಿದೆ. ಇದರಿಂದ ಕಂಗೆಟ್ಟ ಸ್ಥಳೀಯ ನಿವಾಸಿಗಳು ಮನೆಗಳಿಂದ ಹೊರಗೆ ಬಂದು ಪರಿಶೀಲಿಸಿದಾಗ, ವಾಸನೆ ರುದ್ರಭೂಮಿಯಿಂದ ಬರುತ್ತಿರುವುದು ಪತ್ತೆಯಾಗಿದೆ. ತಕ್ಷಣ ಸ್ಥಳೀಯರು ಹಿಂದು ರುದ್ರಭೂಮಿಗೆ ತೆರಳಿ ನೋಡಿದಾಗ ಶವ ಅರೆಬೆಂದ ಸ್ಥಿತಿಯಲ್ಲಿರುವುದು ಕಂಡುಬಂದಿದೆ.

kadaba times
kadaba times

“ಇಲ್ಲಿ ಅಂತ್ಯಕ್ರಿಯೆ ಮಾಡುವಾಗ ಸಂಬಂಧಪಟ್ಟವರು ಇತರ ಸಾರ್ವಜನಿಕರಿಗೆ ಅಥವಾ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಮೃತದೇಹ ಸಂಪೂರ್ಣವಾಗಿ ದಹನವಾಗುವವರೆಗೆ ಯಾರಾದರೂ ಒಬ್ಬರು ಅಲ್ಲಿರಬೇಕು” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಜೊತೆಗೆ, ಪಟ್ಟಣ ಪಂಚಾಯತ್ ಅಧಿಕಾರಿಗಳು ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡುವವರಿಗೆ ಸೂಕ್ತ ನಿರ್ದೇಶನ ಹಾಗೂ ನಿಯಮಾವಳಿಗಳನ್ನು ನೀಡಬೇಕು. ನಿಯಮಿತವಾಗಿ ಪರಿಶೀಲನೆ ನಡೆಸಿ ರುದ್ರಭೂಮಿಯ ಸ್ವಚ್ಛತೆಯ ಕಡೆಗೂ ಹೆಚ್ಚಿನ ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Related Articles

Latest Articles