ದುಬಾರೆಯಲ್ಲಿ ಅಟ್ಟಹಾಸ ಮೆರೆದ ‘ಕಂಜನ್’ ಆನೆಗೆ ದಸರಾದಿಂದ ಗೇಟ್‌ಪಾಸ್

ಮೂರು ವರ್ಷದ ಹಿಂದೆ ಕಡಬದ ರೆಂಜಿಲಾಡಿ ಕಾರ್ಯಾಚರಣೆಯಲ್ಲಿ ಕಂಜನ್ ಭಾಗಿ

kadaba times

ಕಡಬ : ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ಇತ್ತೀಚೆಗೆ ಸಹ ಆನೆ ’ಮಾರ್ತಾಂಡ’ ಹಾಗೂ ಪ್ರವಾಸಿ ಮಹಿಳೆಯೊಬ್ಬರ ಸಾವಿಗೆ ಕಾರಣವಾಗಿ ತೀವ್ರ ಸುದ್ದಿಯಲ್ಲಿರುವ ಸಾಕಾನೆ ‘ಕಂಜನ್’ಗೆ ಮೈಸೂರು ದಸರಾದಿಂದ ಶಾಶ್ವತವಾಗಿ ಗೇಟ್‌ಪಾಸ್ ನೀಡಲಾಗಿದೆ. ಇದರ ನಡುವೆ, ಇದೇ ಕಂಜನ್ ಆನೆ ಮೂರು ವರ್ಷಗಳ ಹಿಂದೆ ಕಡಬ ತಾಲೂಕಿನಲ್ಲಿ ನಡೆದಿದ್ದ  ಕಾಡಾನೆ ಸೆರೆ ಕಾರ್ಯಾಚರಣೆಯಲ್ಲೂ ಪ್ರಮುಖ ಪಾತ್ರ ವಹಿಸಿತ್ತು ಎಂಬ  ಮಾಹಿತಿ ಬೆಳಕಿಗೆ ಬಂದಿದೆ.

kadaba times
uniq
ಕಡಬದ ರೆಂಜಿಲಾಡಿ ಕಾರ್ಯಾಚರಣೆಯಲ್ಲಿ ಕಂಜನ್ ಭಾಗಿ

ಕಡಬ ಸಮೀಪದ ರೆಂಜಿಲಾಡಿಯಲ್ಲಿ ಇಬ್ಬರನ್ನು ಬಲಿ ಪಡೆದುಕೊಂಡಿದ್ದ ಕಾಡಾನೆಯನ್ನು ಸೆರೆಹಿಡಿಯುವ ಕಾರ್ಯಾಚರಣೆಗೆ ದುಬಾರೆ ಆನೆ ಶಿಬಿರದಿಂದ ಕಂಜನ್ ಆನೆ ಸಹಿತ ಒಟ್ಟು 5 ಸಾಕಾನೆಗಳನ್ನು ಕರೆಸಿಕೊಳ್ಳಲಾಗಿತ್ತು. 2023ರ ಫೆಬ್ರವರಿ 20ರಂದು ಬೆಳ್ಳಂಬೆಳಿಗ್ಗೆ ರೆಂಜಿಲಾಡಿ ಗ್ರಾಮದ ಮೀನಾಡಿ ಸಮೀಪ ನಡೆದಿದ್ದ ಆನೆ ದಾಳಿಗೆ ರೆಂಜಿಲಾಡಿ ಗ್ರಾಮದ ನೈಲ ನಿವಾಸಿ, ಪೇರಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರಂಜಿತಾ ರೈ (22 ವರ್ಷ) ಹಾಗೂ ನೈಲ ನಿವಾಸಿಯಾಗಿದ್ದ ರಮೇಶ್ ರೈ (55 ವರ್ಷ) ಎಂಬುವವರು ಮೃತಪಟ್ಟಿದ್ದರು. ಈ ಘಟನೆಯಿಂದ ಆಕ್ರೋಶಗೊಂಡಿದ್ದ ಗ್ರಾಮಸ್ಥರು, ಸ್ಥಳಕ್ಕೆ ಆಗಮಿಸಿದ್ದ ಆಗಿನ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ.ಕೆ. ದಿನೇಶ್‌ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕಾಡಾನೆ ಸೆರೆಗೆ ಒತ್ತಾಯಿಸಿದ್ದರು. ಗ್ರಾಮಸ್ಥರ ಆಕ್ರೋಶದ ಬೆನ್ನಲ್ಲೇ ಫೆಬ್ರವರಿ 21ರಿಂದಲೇ ಕಾಡಾನೆ ಪತ್ತೆ ಕಾರ್ಯಾಚರಣೆ ಆರಂಭಿಸಲಾಯಿತು.

ಅಭಿಮನ್ಯು ಪಡೆ ಜೊತೆಗಿದ್ದ ಕಂಜನ್: ಕಾಡಾನೆ ಸೆರೆಗಾಗಿ ಮೈಸೂರಿನ ತಿಥಿಮತಿ ಹಾಗೂ ದುಬಾರೆಯ ಸಾಕಾನೆ ಶಿಬಿರದಿಂದ 5 ಸಾಕಾನೆಗಳನ್ನು ಕ್ಷಿಪ್ರ ಕಾರ್ಯಪಡೆ (ATF) ವಾಹನದ ಮೂಲಕ ಕರೆತರಲಾಗಿತ್ತು. ಕಾಡಾನೆ ಸೆರೆ ಹಿಡಿಯುವುದರಲ್ಲಿ ಅಪಾರ ಅನುಭವ ಹೊಂದಿರುವ ಅಭಿಮನ್ಯು, ಪ್ರಶಾಂತ್, ಹರ್ಷ ಹಾಗೂ ಮಹೇಂದ್ರ ಆನೆಗಳ ಜೊತೆಗೆ ಈ ಕಂಜನ್ ಆನೆಯೂ ಕಾರ್ಯಾಚರಣೆಗೆ ಸಾಥ್ ನೀಡಿತ್ತು.

ಲಾರಿ ಮೂಲಕ ಬಂದ ಈ ಸಾಕಾನೆಗಳನ್ನು ರೆಂಜಿಲಾಡಿ ಗ್ರಾಮದ ಪೇರಡ್ಕ ಬಳಿಯ ತುಂಬೆ ಅರಣ್ಯ ಪ್ರದೇಶದಲ್ಲಿ ಇಳಿಸಿ, ಪೂಜೆ ಸಲ್ಲಿಸಿ ಕಾರ್ಯಾಚರಣೆಗೆ ಇಳಿಸಲಾಗಿತ್ತು. ಎರಡು ದಿನಗಳ ಸತತ ಕಾರ್ಯಾಚರಣೆಯ ಬಳಿಕ ಫೆಬ್ರವರಿ 23ರಂದು ಕೊಂಬಾರು ಗ್ರಾಮದ ಮಂಡೆಕರ ಸಮೀಪದ ಮುಜೂರು ಅರಣ್ಯ ಪ್ರದೇಶದಲ್ಲಿ ಇಬ್ಬರನ್ನು ಬಲಿಪಡೆದಿದ್ದ ಕಾಡಾನೆಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿತ್ತು. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಕಂಜನ್ ಆನೆಯೂ ಭಾಗಿಯಾಗಿ ಗಮನ ಸೆಳೆದಿತ್ತು.

kadaba times
kadaba times
ಮೈಸೂರು ದಸರಾದಿಂದ ಕಂಜನ್‌ಗೆ ಶಾಶ್ವತ ನಿಷೇಧ

ಸಹ ಆನೆ ಹಾಗೂ ಮಹಿಳೆಯ ಸಾವಿಗೆ ಕಾರಣವಾಗಿ ಕ್ರೂರ ವರ್ತನೆ ತೋರಿದ ಕಂಜನ್ ಆನೆಯನ್ನು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಿಂದ ಈಗ ಶಾಶ್ವತವಾಗಿ ನಿಷೇಧಿಸಲಾಗಿದೆ. ವಾಸ್ತವವಾಗಿ, 2024ರ ಮೈಸೂರು ದಸರಾ ಮಹೋತ್ಸವದ ತಾಲೀಮಿನ ಅವಧಿಯಲ್ಲೂ ಕಂಜನ್ ಭಾರಿ ಗದ್ದಲ ಸೃಷ್ಟಿಸಿತ್ತು. ಮೈಸೂರು ಅರಮನೆಯ ಆವರಣದಲ್ಲೇ ಮತ್ತೊಂದು ದಸರಾ ಆನೆಯನ್ನು ಕಂಜನ್ ಆಕ್ರೋಶದಿಂದ ಅಟ್ಟಿಸಿಕೊಂಡು ಹೋಗಿತ್ತು. ಇದು ಪ್ರವಾಸಿಗರು ಹಾಗೂ ಅಧಿಕಾರಿಗಳಲ್ಲಿ ತೀವ್ರ ಆತಂಕ ಮೂಡಿಸಿತ್ತು. ಈತನ ಉಗ್ರ ರೂಪ ಹಾಗೂ ಇತ್ತೀಚಿನ ಘಟನೆಗಳನ್ನು ಪರಿಗಣಿಸಿ ಅರಣ್ಯ ಇಲಾಖೆ ಕಂಜನ್ ಆನೆಗೆ ದಸರಾದಿಂದ ಕೋಕ್ ನೀಡಿದೆ.

ದುಬಾರೆಯಲ್ಲಿ ನಡೆದಿದ್ದೇನು? ಮಾರ್ತಾಂಡ ಆನೆ, ಮಹಿಳೆ ಬಲಿ

ಮೇ 18ರಂದು ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುವ ವೇಳೆ ಕಂಜನ್ ಮತ್ತು ಮಾರ್ತಾಂಡ ಆನೆಗಳ ನಡುವೆ ದಿಢೀರ್ ಕಾದಾಟ ಆರಂಭವಾಗಿತ್ತು. ಕಂಜನ್ ಭೀಕರ ದಾಳಿಗೆ ಸಿಲುಕಿದ ಮಾರ್ತಾಂಡ ಆನೆ ನಿಯಂತ್ರಣ ತಪ್ಪಿ ನದಿ ದಂಡೆಯಲ್ಲಿದ್ದ ಪ್ರವಾಸಿಗರ ಮೇಲೆ ಬಿದ್ದಿತ್ತು.

ದುರದೃಷ್ಟವಶಾತ್ ಆನೆಯ ಅಡಿಯಲ್ಲಿ ಸಿಲುಕಿದ ಚೆನ್ನೈ ಮೂಲದ ಮಹಿಳೆ ತುಳಸಿ (33 ವರ್ಷ) ಸ್ಥಳದಲ್ಲೇ ಮೃತಪಟ್ಟರೆ, ಆಕೆಯ ಪತಿ ಮತ್ತು ಮಗು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಕಾದಾಟದ ವೇಳೆ ಕಂಜನ್ ಆನೆಯು ಮಾರ್ತಾಂಡ ಆನೆಯ ಹೊಟ್ಟೆ, ಕಿವಿ ಹಾಗೂ ದೇಹದ ಇತರ ಭಾಗಗಳಿಗೆ ತನ್ನ ದಂತಗಳಿಂದ ತೀವ್ರವಾಗಿ ತಿವಿದು ಗಂಭೀರ ಗಾಯಗೊಳಿಸಿತ್ತು. ಗಾಯಗೊಂಡಿದ್ದ ಮಾರ್ತಾಂಡ ಆನೆಗೆ ದುಬಾರೆ ಶಿಬಿರದಲ್ಲೇ ವೈದ್ಯರು ತುರ್ತು ಚಿಕಿತ್ಸೆ ನೀಡಿದ್ದರೂ, ಚಿಕಿತ್ಸೆ ಫಲಿಸದೆ ಮೇ 19ರಂದು ಅದು ಮೃತಪಟ್ಟಿತ್ತು. ಒಟ್ಟಿನಲ್ಲಿ ಮೂರು ವರ್ಷಗಳ ಹಿಂದೆ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಹೀರೊ ಆಗಿದ್ದ ಕಂಜನ್, ಇಂದು ತನ್ನದೇ ಸಹ ಆನೆ ಹಾಗೂ ಪ್ರವಾಸಿಗಳ ಪಾಲಿಗೆ ವಿಲನ್ ಆಗಿ ದಸರಾದಿಂದಲೂ ಬಹಿಷ್ಕಾರಕ್ಕೊಳಗಾಗಿದೆ.

Related Articles

Latest Articles