
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ನಡೆದಿದ್ದ ಶ್ರೀಧರ ಅವರ ಕೊಲೆ ಪ್ರಕರಣ ಇದೀಗ ಮತ್ತೊಂದು ಮಹತ್ವದ ಹಾಗೂ ರೋಚಕ ತಿರುವು ಪಡೆದಿದೆ. ಪ್ರಕರಣದ ಮರುತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ (SIT) ಎದುರು ಆರಂಭದಲ್ಲಿ ಮಂಪರು ಪರೀಕ್ಷೆ (Narco Analysis) ಹಾಗೂ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಪ್ಪಿಕೊಂಡಿದ್ದ ಆರೋಪಿಗಳು, ಇದೀಗ ನ್ಯಾಯಾಲಯದ ಮುಂದೆ ಉಲ್ಟಾ ಹೊಡೆದಿದ್ದಾರೆ.


“ನಾವು ಈ ಪರೀಕ್ಷೆಗಳಿಗೆ ಒಳಪಡುವುದಿಲ್ಲ” ಎಂದು ಆರೋಪಿಗಳು ಕೋರ್ಟ್ ಮುಂದೆ ಹೇಳಿರುವುದು ತನಿಖಾ ಸಂಸ್ಥೆಗೆ ತಲೆನೋವಾಗಿ ಪರಿಣಮಿಸಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಆರೋಪಿಗಳ ದಿಢೀರ್ ನಿಲುವು ಬದಲಾವಣೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಕೆ.ಎಲ್. ಆನಂದ್ ಗೌಡ ಹಾಗೂ ಮಹೇಶ್ ಅವರನ್ನು ಮಂಪರು ಮತ್ತು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಲು ಎಸ್ಐಟಿ ಅಧಿಕಾರಿಗಳು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆರಂಭಿಕ ವಿಚಾರಣೆ ವೇಳೆ ಅಧಿಕಾರಿಗಳ ಎದುರು ಈ ಪರೀಕ್ಷೆಗಳಿಗೆ ಯಾವುದೇ ಅಭ್ಯಂತರವಿಲ್ಲ ಎಂದಿದ್ದ ನಾಲ್ವರು ಆರೋಪಿಗಳು, ಇದೀಗ ನ್ಯಾಯಾಲಯದ ಕಟಕಟೆಯಲ್ಲಿ ನಿಂತಾಗ ತಮ್ಮ ನಿಲುವು ಬದಲಿಸಿಕೊಂಡು ಪರೀಕ್ಷೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳ ಈ ದಿಢೀರ್ ನಡೆ ಪ್ರಕರಣದ ಸುತ್ತಲಿನ ರಹಸ್ಯವನ್ನು ಮತ್ತಷ್ಟು ದಟ್ಟವಾಗಿಸಿದೆ.
ಏನಿದು ಘಟನೆ?
ಶಿಬಾಜೆ ಗ್ರಾಮದ ಎ.ಸಿ. ಕುರಿಯನ್ ಎಂಬುವವರ ಮಾಲೀಕತ್ವದ ತೋಟದಲ್ಲಿ ಶ್ರೀಧರ್ ಅವರು ಮೇಲ್ವಿಚಾರಕರಾಗಿ (Superviser) ಕೆಲಸ ಮಾಡುತ್ತಿದ್ದರು. 2022ರ ಡಿಸೆಂಬರ್ 17ರಂದು ಸಂಜೆ 5.30ರ ಸುಮಾರಿಗೆ ಶ್ರೀಧರ್ ಅವರ ಮೇಲೆ ದುಷ್ಕರ್ಮಿಗಳು ಭೀಕರ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಮರುದಿನ, ಅಂದರೆ ಡಿಸೆಂಬರ್ 18ರಂದು ಶ್ರೀಧರ್ ಅವರ ಮೃತದೇಹ ತೋಟದಲ್ಲಿ ಸಂಪೂರ್ಣ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಈ ಭೀಕರ ಕೊಲೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತಲ್ಲದೆ, ಭಾರೀ ಚರ್ಚೆಗೆ ಗ್ರಾಸವಾಗಿತ್ತು.


ಹೈಕೋರ್ಟ್ ಆದೇಶದ ಹಿನ್ನೆಲೆ: ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ (CID) ಪೊಲೀಸರು, ಆರೋಪಿಗಳು ನಿರ್ದೋಷಿಗಳು ಎಂಬ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಆದರೆ, ಸಿಐಡಿ ತನಿಖೆಯ ನಡೆ ಮತ್ತು ವರದಿಯ ಕುರಿತು ಸಾರ್ವಜನಿಕ ವಲಯದಲ್ಲಿ ಹಾಗೂ ಮೃತರ ಕುಟುಂಬಸ್ಥರಲ್ಲಿ ಹತ್ತಾರು ಅನುಮಾನಗಳು ವ್ಯಕ್ತವಾಗಿದ್ದವು. ತನಿಖೆ ಸರಿಯಾಗಿ ನಡೆದಿಲ್ಲ ಎಂದು ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮರುತನಿಖೆಗೆ ಸೂಚಿಸಿದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು 2026ರ ಫೆಬ್ರವರಿ 20ರಂದು ವಿಶೇಷ ತನಿಖಾ ದಳವನ್ನು (SIT) ರಚಿಸಿ ಆದೇಶ ಹೊರಡಿಸಿತ್ತು.
ಖಡಕ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ
ಸದ್ಯ ಈ ಹೈಪ್ರೊಫೈಲ್ ಕೊಲೆ ಪ್ರಕರಣದ ತನಿಖೆಯನ್ನು ಅತ್ಯಂತ ದಕ್ಷ ಅಧಿಕಾರಿಗಳ ತಂಡ ನಡೆಸುತ್ತಿದೆ. ಬೆಂಗಳೂರು ಕೇಂದ್ರ ವಲಯ ಐಜಿಪಿ ಲಾಬೂರಾಮ್, ಉಡುಪಿ ಎಸ್ಪಿ ಹರಿರಾಮ್ ಶಂಕರ್ ಹಾಗೂ ಡಿವೈಎಸ್ಪಿ ಹರೀಶ್ ನೇತೃತ್ವದ ಎಸ್ಐಟಿ ತಂಡ ಪ್ರಕರಣದ ಆಳ-ಅಗಲವನ್ನು ಕೆದಕುತ್ತಿದೆ.
ಇದೀಗ ಆರೋಪಿಗಳು ಸೈಂಟಿಫಿಕ್ ಟೆಸ್ಟ್ಗಳಿಗೆ (Scientific Tests) ಅಸಹಕಾರ ತೋರುತ್ತಿರುವುದರಿಂದ, ಎಸ್ಐಟಿ ಮುಂದಿನ ನಡೆ ಏನು? ನ್ಯಾಯಾಲಯದ ಮೂಲಕವೇ ಇದಕ್ಕೆ ಅನುಮತಿ ಪಡೆಯುತ್ತಾರಾ ಅಥವಾ ಬೇರೆ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ಮುನ್ನಡೆಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
