
ಕಡಬ: ತಾಲೂಕಿನ ಬಲ್ಯ ಗ್ರಾಮದ ಪೇಟೆಯಲ್ಲಿರುವ ಅಂಗಡಿಯೊಂದರ ರೋಲಿಂಗ್ ಶಟರ್ ಮುರಿದು ಒಳನುಗ್ಗಿದ ಕಳ್ಳರು, ಅಂಗಡಿಯಲ್ಲಿದ್ದ ಸುಮಾರು 14,000 ರೂಪಾಯಿ ನಗದು ಹಣವನ್ನು ಕಳವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬಲ್ಯ ಗ್ರಾಮದ ಗೋವಿಂದಕಟ್ಟೆ ನಿವಾಸಿ, 73 ವರ್ಷದ ಬೇಬಿ ಕೆ.ಇ. ಎಂಬುವವರು ಬಲ್ಯ ಪೇಟೆಯಲ್ಲಿ ಅಂಗಡಿ ವ್ಯಾಪಾರ ನಡೆಸುತ್ತಿದ್ದಾರೆ. ಮೇ 19ರಂದು ರಾತ್ರಿ 8:45ರ ಸುಮಾರಿಗೆ ಅವರು ಎಂದಿನಂತೆ ಅಂಗಡಿಯ ರೋಲಿಂಗ್ ಶಟರ್ಗೆ ಸೆಂಟರ್ ಲಾಕ್ ಹಾಕಿ ಮನೆಗೆ ತೆರಳಿದ್ದರು.
ಮರುದಿನ (ಮೇ 20) ಬೆಳಗ್ಗೆ 7:00 ಗಂಟೆಗೆ ಅಂಗಡಿ ತೆರೆಯಲು ಬಂದಾಗ, ಯಾರೋ ಅಪರಿಚಿತ ಕಳ್ಳರು ಯಾವುದೋ ಆಯುಧ ಬಳಸಿ ರೋಲಿಂಗ್ ಶಟರ್ ಅನ್ನು ಎತ್ತಿ, ಲಾಕ್ ಮುರಿದು ಒಳನುಗ್ಗಿರುವುದು ಕಂಡುಬಂದಿದೆ. ಅಂಗಡಿಯೊಳಗೆ ಪರಿಶೀಲಿಸಿದಾಗ, ಡಬ್ಬವೊಂದರಲ್ಲಿ ಸಂಗ್ರಹಿಸಿಡಲಾಗಿದ್ದ 20, 10 ಮತ್ತು 5 ರೂಪಾಯಿ ಮುಖಬೆಲೆಯ ಒಟ್ಟು 14,000 ರೂಪಾಯಿ ಮೌಲ್ಯದ ನಾಣ್ಯಗಳನ್ನು ಕಳ್ಳರು ದೋಚಿರುವುದು ಪತ್ತೆಯಾಗಿದೆ.
ಕಳ್ಳರು ಹಣವನ್ನು ತೆಗೆದುಕೊಂಡು ಖಾಲಿ ಡಬ್ಬವನ್ನು ಅಲ್ಲೇ ಎಸೆದು ಪರಾರಿಯಾಗಿದ್ದಾರೆ. ಎರಡು ದಿನಗಳ ಹಿಂದಷ್ಟೇ ಅಂಗಡಿ ಮಾಲೀಕರು ಈ ಹಣವನ್ನು ಲೆಕ್ಕ ಮಾಡಿ ಇಟ್ಟಿದ್ದರು ಎಂದು ತಿಳಿದುಬಂದಿದೆ.


ಅಂಗಡಿ ಮಾಲೀಕ ಬೇಬಿ ಕೆ.ಇ. ಅವರು ನೀಡಿದ ಲಿಖಿತ ದೂರಿನ ಮೇರೆಗೆ ಕಡಬ ಪೊಲೀಸರು ಅಪರಿಚಿತ ಕಳ್ಳರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳೀಯರ ಪ್ರಕಾರ ಪಕ್ಕದಲ್ಲಿದ್ದ ದೇವಸ್ಥಾನ ಮತ್ತು ಮನೆಯೊಂದಕ್ಕೂ ಕಳ್ಳತನಕ್ಕೆ ಮುಂದಾಗಿರುವುದಾಗಿ ತಿಳಿದು ಬಂದಿದೆ. ಸದ್ಯ ಕಡಬ ಪೊಲೀಸರು ಮತ್ತು ಉಪವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ
