ಬಾವಿಯ ಮಣ್ಣು ತೆಗೆಯುವಾಗ ಅನಾಹುತ; ಅಪಾಯಕ್ಕೆ ಸಿಲುಕಿದ್ದ ಮೂವರನ್ನು ರಕ್ಷಿಸಿದ ಅಗ್ನಿಶಾಮಕ ದಳ

kadaba times

ಬಾವಿಯ ಹೂಳು ಹಾಗೂ ಮಣ್ಣು ತೆಗೆಯುವ ಕೆಲಸದಲ್ಲಿ ನಿರತರಾಗಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ಅಪಾಯಕ್ಕೆ ಸಿಲುಕಿದ್ದ ಮೂವರು ಕಾರ್ಮಿಕರನ್ನು ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಅತ್ಯಂತ ಸಾಹಸಮಯವಾಗಿ ರಕ್ಷಿಸಿದ ಘಟನೆ ಮೇ 10ರಂದು ಕಾರ್ಕಳ ತಾಲೂಕಿನ ಕುಕ್ಕುಂದೂರು ಅಶ್ವಥಪುರದಲ್ಲಿ ನಡೆದಿದೆ.

kadaba times
uniq

ಕುಕ್ಕುಂದೂರು ಅಶ್ವಥಪುರ ನಿವಾಸಿಗಳಾದ ರಾಜೇಶ್‌ (42), ಪವನ್‌ (29) ಹಾಗೂ ಗೋಪಾಲ್‌ ನಾಯ್ಕ್‌ (52) ಎಂಬವರು ಬಾವಿಯ ಮಣ್ಣು ತೆಗೆಯಲೆಂದು ಬಾವಿಗೆ ಇಳಿದಿದ್ದರು. ಕೆಲಸ ಮುಗಿಸಿ ರಾಜೇಶ್ ಅವರು ಮೇಲಕ್ಕೆ ಬರುವ ಸಂದರ್ಭದಲ್ಲಿ ಆಯತಪ್ಪಿ ಬಾವಿಯ ಒಳಕ್ಕೆ ಬಿದ್ದಿದ್ದಾರೆ. ಈ ವೇಳೆ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ರಕ್ಷಿಸಲು ಮುಂದಾದ ಪವನ್‌ ಹಾಗೂ ಗೋಪಾಲ್‌ ನಾಯ್ಕ್‌ ಕೂಡ ಬಾವಿಯ ಒಳಗೆ ಸಿಲುಕಿಕೊಂಡು ಹೊರಬರಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು.

ಸ್ಥಳೀಯರು ತಕ್ಷಣವೇ ಕಾರ್ಕಳ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಬಾವಿಯ ಆಳ ಹಾಗೂ ಗಾಯಾಳುಗಳ ಸ್ಥಿತಿಯನ್ನು ಗಮನಿಸಿ ಅತ್ಯಂತ ವ್ಯವಸ್ಥಿತವಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಹಗ್ಗ ಹಾಗೂ ಇತರ ಸುರಕ್ಷತಾ ಸಾಧನಗಳ ಮೂಲಕ ಬಾವಿಗಿಳಿದ ಸಿಬ್ಬಂದಿ, ಒಳಗೆ ಸಿಲುಕಿದ್ದ ಮೂವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.

kadaba times
kadaba times

ಬಾವಿಗೆ ಬಿದ್ದ ಪರಿಣಾಮ ಗಾಯಗೊಂಡಿದ್ದ ರಾಜೇಶ್ ಅವರನ್ನು ಸ್ಥಳದಲ್ಲಿದ್ದ ಆಂಬ್ಯುಲೆನ್ಸ್ ಮೂಲಕ ತಕ್ಷಣವೇ ಕಾರ್ಕಳದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಗ್ನಿಶಾಮಕ ಠಾಣಾಧಿಕಾರಿ ಅಲ್ಬರ್ಟ್ ಮೋನಿಸ್‌ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ರೂಪೇಶ್‌, ಸುರೇಶ, ಮುಜಾಮಿಲ್‌, ದಿನೇಶ್‌, ಗಣೇಶ್‌ ಹಾಗೂ ನಿತ್ಯಾನಂದ ಅವರು ಸಕ್ರಿಯವಾಗಿ ಪಾಲ್ಗೊಂಡು ಸಮಯಪ್ರಜ್ಞೆ ಮೆರೆದಿದ್ದಾರೆ. ಅಗ್ನಿಶಾಮಕ ದಳದ ಈ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ

Related Articles

Latest Articles