
ಕಡಬ: ತಾಲೂಕಿನ ಐತ್ತೂರು ಗ್ರಾಮದ ಕೆರ್ಮಾಯಿಯಲ್ಲಿ ಪ್ರವಾಸಕ್ಕೆಂದು ಬಂದಿದ್ದ ಕ್ರೈಸ್ತ ಕುಟುಂಬಗಳ ಮೇಲೆ ಮತಾಂತರ ಹಾಗೂ ಅನೈತಿಕ ಚಟುವಟಿಕೆಯ ಸುಳ್ಳು ಆರೋಪ ಹೊರಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕ್ರೈಸ್ತ ಸಂಘಟನೆ ಆಗ್ರಹಿಸಿದೆ.


ಬೆಂಗಳೂರಿನಿಂದ ತಮ್ಮ ಸಂಬಂಧಿಕರ ಮನೆಗೆ ಪ್ರವಾಸದ ನಿಮಿತ್ತ ಬಂದಿದ್ದ ಕುಟುಂಬದ ಸದಸ್ಯರ ಮೇಲೆ ದೂರುದಾರರು ಕಡಬ ಪೊಲೀಸರಿಗೆ ನೀಡಿದ ದೂರಿನಲ್ಲಿ ಅತ್ಯಂತ ಗಂಭೀರ ಹಾಗೂ ಕಲ್ಪಿತ ಆರೋಪಗಳನ್ನು ಮಾಡಿದ್ದಾರೆ. “ಮುಗ್ಧ ಹಿಂದೂಗಳನ್ನು ಮತಾಂತರ ಮಾಡುವ ಉದ್ದೇಶದಿಂದ ಮಹಿಳೆಯರು ಮತ್ತು ಮಕ್ಕಳನ್ನು ಅಕ್ರಮವಾಗಿ ಕೂಡಿಸಿಕೊಂಡು ಅನೈತಿಕ ಚಟುವಟಿಕೆ ನಡೆಸಲಾಗುತ್ತಿದೆ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಮೂಲಕ ಅಮಾಯಕ ಕುಟುಂಬಗಳ ಘನತೆಗೆ ಸಾರ್ವಜನಿಕವಾಗಿ ಧಕ್ಕೆ ತರಲಾಗಿದೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ತನಿಖೆಯಲ್ಲಿ ಬಯಲಾದ ಸತ್ಯ
ಪ್ರಕರಣದ ಗಾಂಭೀರ್ಯ ಅರಿತ ಕಡಬ ಪೊಲೀಸರು ಮತ್ತು ಉನ್ನತ ಅಧಿಕಾರಿಗಳು ಸ್ಥಳ ತನಿಖೆ ನಡೆಸಿದಾಗ, ಅಲ್ಲಿ ಯಾವುದೇ ಮತಾಂತರ ಅಥವಾ ಕಾನೂನುಬಾಹಿರ ಚಟುವಟಿಕೆಗಳು ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ. ಬೆಂಗಳೂರಿನಿಂದ ಬಂದಿದ್ದವರು ಕೇವಲ ಪ್ರವಾಸಿಗರು ಮತ್ತು ತಮ್ಮ ಸಂಬಂಧಿಕರ ಮನೆಯಲ್ಲಿ ತಂಗಿದ್ದರು ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸುಳ್ಳು ದೂರು ನೀಡಿ ಇಲಾಖೆಯನ್ನು ದಾರಿ ತಪ್ಪಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.


ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯವೈಖರಿಗೆ ಶ್ಲಾಘನೆ
ಪ್ರಕರಣದ ಸೂಕ್ಷ್ಮತೆಯನ್ನು ಅರಿತು ಯಾವುದೇ ಒತ್ತಡಕ್ಕೆ ಮಣಿಯದೆ ಅತ್ಯಂತ ಕ್ಷಿಪ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಅರುಣ್ ಕೆ. ಅವರ ಕಾರ್ಯವೈಖರಿಯನ್ನು ಕರ್ನಾಟಕ ಕ್ರೈಸ್ತ ಸಂಘಟನೆಯ ಮುಖಂಡರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇಲಾಖೆಯ ಈ ಪಾರದರ್ಶಕ ತನಿಖೆಯಿಂದ ಅಮಾಯಕರ ಮೇಲಿನ ಆರೋಪ ಮುಕ್ತವಾದಂತಾಗಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಕ್ರೈಸ್ತ ಸಂಘಟನೆಯ ರಾಜ್ಯ ಅಧ್ಯಕ್ಷ ಸ್ಟ್ಯಾನಿ ಪಿಂಟೋ ಅವರು, “ದೂರಿನಲ್ಲಿ ‘ಅನೈತಿಕ ಚಟುವಟಿಕೆ’ ಮತ್ತು ‘ಮತಾಂತರ’ ಎಂಬ ಅಪಾಯಕಾರಿ ಪದಗಳನ್ನು ಬಳಸಿರುವುದು ವಿಕೃತ ಮನಸ್ಥಿತಿಯ ದ್ಯೋತಕವಾಗಿದೆ. ಕೇವಲ ಧಾರ್ಮಿಕ ದ್ವೇಷದಿಂದ ಪ್ರವಾಸಿಗರನ್ನು ಗುರಿಯಾಗಿಸಿರುವುದು ಖಂಡನೀಯ. ಸುಳ್ಳು ದೂರು ನೀಡಿ ಪೊಲೀಸ್ ಇಲಾಖೆಯ ಅಮೂಲ್ಯ ಸಮಯ ವ್ಯರ್ಥ ಮಾಡಿದುದಲ್ಲದೆ, ಒಂದು ಸಮುದಾಯದ ಭಾವನೆಗೆ ಧಕ್ಕೆ ತಂದಿರುವ ದೂರುದಾರನ ವಿರುದ್ಧ ಕೂಡಲೇ ಎಫ್ಐಆರ್ ದಾಖಲಿಸಿ ಬಂಧಿಸಬೇಕು” ಎಂದು ಒತ್ತಾಯಿಸಿದ್ದಾರೆ. ಸಮಾಜದಲ್ಲಿ ಕೋಮು ಸಾಮರಸ್ಯ ಕದಡುವ ಇಂತಹ ಪ್ರಯತ್ನಗಳನ್ನು ಕಾನೂನುಬದ್ಧವಾಗಿ ಹತ್ತಿಕ್ಕಬೇಕು ಎಂದು ಮನವಿ ಮಾಡಿದ್ದಾರೆ.
