
ಮನೆಗೆಲಸ ಮಾಡುತ್ತಿದ್ದ ಕಲಿತಾ ಮಾಝಿ ಈಗ ಪಶ್ಚಿಮ ಬಂಗಾಳದ ಶಾಸಕಿ. ಬಡತನದ ನಡುವೆಯೂ ರಾಜಕೀಯದಲ್ಲಿ ಛಾಪು ಮೂಡಿಸಿದ ಅವರ ಸ್ಪೂರ್ತಿದಾಯಕ ಪಯಣದ ವಿವರ ಇಲ್ಲಿದೆ.


ರಾಜಕೀಯವೆಂದರೆ ಕೇವಲ ಶ್ರೀಮಂತರ ಆಟ ಎಂಬ ಮಾತನ್ನು ಪಶ್ಚಿಮ ಬಂಗಾಳದ ಮಹಿಳೆಯೊಬ್ಬರು ಸುಳ್ಳು ಮಾಡಿದ್ದಾರೆ. ತಿಂಗಳಿಗೆ ಕೇವಲ 2,500 ರೂ. ಸಂಪಾದನೆಗಾಗಿ ಮನೆಗೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಇಂದು ವಿಧಾನಸಭೆಯ ಮೆಟ್ಟಿಲೇರಿದ್ದಾರೆ.
ಪಶ್ಚಿಮ ಬಂಗಾಳದ ಆಸ್ಗ್ರಾಮ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕಲಿತಾ ಮಾಝಿ, ಭರ್ಜರಿ ಜಯ ಸಾಧಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ.
ಕಲಿತಾ ಮಾಝಿ ಅವರ ಜೀವನದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಅವರು ಬಾಲ್ಯದಲ್ಲೇ ಶಿಕ್ಷಣವನ್ನು ಅರ್ಧಕ್ಕೆ ಬಿಡಬೇಕಾಯಿತು. ಕುಟುಂಬದ ಹೊರೆ ಹೊರಲು ಅನೇಕರ ಮನೆಗಳಲ್ಲಿ ಪಾತ್ರೆ ತೊಳೆದು, ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಅವರ ಪತಿ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದು, ದಂಪತಿಗೆ 8ನೇ ತರಗತಿಯಲ್ಲಿ ಓದುತ್ತಿರುವ ಒಬ್ಬ ಮಗನಿದ್ದಾನೆ. ಇಂತಹ ಕಷ್ಟದ ಸಂದರ್ಭದಲ್ಲೂ ಅವರು ಸಮಾಜ ಸೇವೆಯ ಹಂಬಲವನ್ನು ಕೈಬಿಟ್ಟಿರಲಿಲ್ಲ.


ಬೂತ್ ಮಟ್ಟದ ಕಾರ್ಯಕರ್ತೆಯಿಂದ ಶಾಸಕಿಯವರೆಗೆ
ಕಳೆದ ಹತ್ತು ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿರುವ ಕಲಿತಾ, ಒಬ್ಬ ಸಾಮಾನ್ಯ ಬೂತ್ ಮಟ್ಟದ ಕಾರ್ಯಕರ್ತೆಯಾಗಿ ಬಿಜೆಪಿಯಲ್ಲಿ ಕೆಲಸ ಆರಂಭಿಸಿದರು. ಜನರ ಕಷ್ಟಕ್ಕೆ ಸ್ಪಂದಿಸುತ್ತಾ ಹಂತ ಹಂತವಾಗಿ ಬೆಳೆದ ಅವರಿಗೆ, ಪಕ್ಷವು 2021ರ ಚುನಾವಣೆಯಲ್ಲಿ ಮೊದಲ ಬಾರಿಗೆ ಟಿಕೆಟ್ ನೀಡಿತ್ತು. ಅಂದು ಸೋತರೂ ದೃತಿಗೆಡದ ಅವರು, ಜನರೊಂದಿಗೆ ಸಂಪರ್ಕದಲ್ಲಿದ್ದರು. ಅವರ ಪ್ರಾಮಾಣಿಕತೆ ಮತ್ತು ಪರಿಶ್ರಮವನ್ನು ಗುರುತಿಸಿದ ಬಿಜೆಪಿ ನಾಯಕತ್ವ, 2026ರಲ್ಲಿ ಮತ್ತೆ ಅವಕಾಶ ನೀಡಿತು. ಈ ಬಾರಿ 12,535 ಮತಗಳ ಅಂತರದಿಂದ ಗೆದ್ದು ಬೀಗುವ ಮೂಲಕ ಅವರು ಇತಿಹಾಸ ಸೃಷ್ಟಿಸಿದ್ದಾರೆ.
ಆಸ್ತಿಗಿಂತ ಪ್ರಾಮಾಣಿಕತೆಯೇ ಬಂಡವಾಳ
ಚುನಾವಣಾ ಅಫಿಡವಿಟ್ ಪ್ರಕಾರ, ಕಲಿತಾ ಮಾಝಿ ಅವರ ಒಟ್ಟು ಆಸ್ತಿ ಕೇವಲ 1,61,216 ರೂಪಾಯಿಗಳು. ಇದರಲ್ಲಿ ಬ್ಯಾಂಕ್ ಠೇವಣಿ, ಕೈಯಲ್ಲಿರುವ ನಗದು ಮತ್ತು ಎಲ್ಐಸಿ ಪಾಲಿಸಿಗಳು ಸೇರಿವೆ. ಅವರ ಪತಿ 871 ಚದರ ಅಡಿಯ ಒಂದು ಸಣ್ಣ ನಿವೇಶನವನ್ನು ಹೊಂದಿದ್ದು, ಅದರ ಮೌಲ್ಯ ಸುಮಾರು 3 ಲಕ್ಷ ರೂ. ಆಗಿದೆ. ಎರಡು ಸಣ್ಣ ಕ್ರಿಮಿನಲ್ ಪ್ರಕರಣಗಳಿದ್ದರೂ, ಅವು ಹೋರಾಟದ ಹಾದಿಯಲ್ಲಿ ಬಂದವುಗಳೇ ಹೊರತು ಗಂಭೀರ ಸ್ವರೂಪದ್ದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಹಿಳಾ ಶಕ್ತಿಯ ಸಂಕೇತ
ದುಡಿಮೆಯೇ ದೇವರು ಎಂದು ನಂಬಿ, ಮನೆಗೆಲಸದ ನಡುವೆಯೂ ರಾಜಕೀಯದಲ್ಲಿ ಛಾಪು ಮೂಡಿಸಿದ ಕಲಿತಾ ಮಾಝಿ ಅವರ ಈ ಗೆಲುವು ಕೋಟ್ಯಂತರ ಶ್ರಮಜೀವಿಗಳಿಗೆ ಸ್ಫೂರ್ತಿಯಾಗಿದೆ. ಅಧಿಕಾರ ಎನ್ನುವುದು ಕೇವಲ ಹಣವಿದ್ದವರಿಗೆ ಮಾತ್ರವಲ್ಲ, ಪ್ರಾಮಾಣಿಕವಾಗಿ ಜನಸೇವೆ ಮಾಡುವ ಸಾಮಾನ್ಯರಿಗೂ ಒಲಿಯುತ್ತದೆ ಎಂಬುದಕ್ಕೆ ಕಲಿತಾ ಅವರೇ ಸಾಕ್ಷಿ.
