ಕೆರೆಯಲ್ಲಿ ಬಾತುಕೋಳಿ ಹಿಡಿಯಲು ಹೋಗಿ ನಾಲ್ವರು ಮಕ್ಕಳು ಸಾವು

kadaba times

ಕೆರೆಯಲ್ಲಿ ಬಾತುಕೋಳಿ ಹಿಡಿಯಲು ಹೋಗಿ ನಾಲ್ವರು ಮಕ್ಕಳು ನೀರು ಪಾಲಾದ ದಾರುಣ ಘಟನೆ ನಡೆದಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.

kadaba times
uniq

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕರುಳು ಹಿಂಡುವ ಘಟನೆಯೊಂದು ಸಂಭವಿಸಿದೆ. ಕೆರೆಯಲ್ಲಿ ಬಾತುಕೋಳಿ ಹಿಡಿಯಲು ಹೋದ ನಾಲ್ವರು ಮಕ್ಕಳು ನೀರು ಪಾಲಾದ ದಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಅರಳಗುಪ್ಪೆ ಗ್ರಾಮದಲ್ಲಿ ಸೋಮವಾರ (ಮೇ 4) ನಡೆದಿದೆ.

ಘಟನೆಯ ವಿವರ: ಅರಳಗುಪ್ಪೆ ಗ್ರಾಮದ ಕಾರಂಜಿ ಕೆರೆಯಲ್ಲಿ ಈ ಘಟನೆ ಸಂಭವಿಸಿದೆ. ಮೃತಪಟ್ಟ ದುರ್ದೈವಿಗಳು 5 ರಿಂದ 14 ವರ್ಷದೊಳಗಿನವರಾಗಿದ್ದು, ಅವರನ್ನು ಮಹಾದಿಯಾ, ಅರುನುಸ್, ನಾಯುಸ್ ಮತ್ತು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಈ ಮಕ್ಕಳು ಸಂಬಂಧಿಕರ ಮನೆಗೆ ಅತಿಥಿಗಳಾಗಿ ಬಂದಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿರುವುದು ವಿಷಾದನೀಯ.

ಆಗಿದ್ದೇನು? ಮಕ್ಕಳು ಕೆರೆಯ ದಡದಲ್ಲಿ ಆಟವಾಡುತ್ತಿದ್ದಾಗ ಬಾತುಕೋಳಿಯೊಂದು ಕೆರೆಗೆ ಇಳಿದಿದೆ. ಅದನ್ನು ಹಿಡಿಯಲು ಹೋಗಿ ಒಬ್ಬರ ಹಿಂದೆ ಒಬ್ಬರಂತೆ ನಾಲ್ವರು ಮಕ್ಕಳು ನೀರಿನ ಆಳಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಈ ಗುಂಪಿನಲ್ಲಿದ್ದ ನಾಲ್ಕು ವರ್ಷದ ಬಾಲಕ ಅರ್ಮಾನ್ ಎಂಬಾತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

kadaba times
kadaba times

ಪೋಷಕರ ಆಕ್ರಂದನ: ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಆಸ್ಪತ್ರೆಯ ಮುಂಭಾಗ ಮಕ್ಕಳ ಮೃತದೇಹಗಳನ್ನು ಕಂಡು ಪೋಷಕರು ಹತಾಶರಾಗಿ ಹಲುಬುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಪೊಲೀಸ್ ಭೇಟಿ: ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ. ಬೇಸಿಗೆಯ ರಜೆಯ ಮಜಾ ಕಳೆಯಲು ಬಂದ ಮಕ್ಕಳು ಹೀಗೆ ಹೆಣವಾಗಿ ಮರಳಿದ್ದು ಇಡೀ ಗ್ರಾಮವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ.

Related Articles

Latest Articles