
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸೊಣ್ಣವಾಡಿ ಗ್ರಾಮದಲ್ಲಿ ಎಸೆಸೆಲ್ಸಿ ಪಾಸ್ ಆದ ಖುಷಿಯಲ್ಲಿ ಈಜಲು ತೆರಳಿದ್ದ ಕಿರಣ್ (15) ಎಂಬ ಬಾಲಕ ಬಾವಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಪೂರ್ಣ ಮಾಹಿತಿ ಇಲ್ಲಿದೆ.


ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾದ ಸಂಭ್ರಮದಲ್ಲಿದ್ದ ಬಾಲಕನೊಬ್ಬ, ಸ್ನೇಹಿತರ ಜೊತೆ ಈಜಲು ತೆರಳಿ ಬಾವಿಯಲ್ಲಿ ಮುಳುಗಿ ನಾಪತ್ತೆಯಾಗಿರುವ ದಾರುಣ ಘಟನೆ ಕೋಲಾರದ ಸೊಣ್ಣವಾಡಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ಸೊಣ್ಣವಾಡಿ ಗ್ರಾಮದ ಕಿರಣ್ (15) ನಾಪತ್ತೆಯಾದ ಬಾಲಕ. ಇಂದು ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಿರಣ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದನು. ಈ ಯಶಸ್ಸಿನ ಖುಷಿಯನ್ನು ಹಂಚಿಕೊಳ್ಳಲು ತನ್ನ ಸ್ನೇಹಿತರೊಂದಿಗೆ ಗ್ರಾಮದ ಸಮೀಪವಿರುವ ಆಳವಾದ ಬಾವಿಗೆ ಈಜಲು ತೆರಳಿದ್ದನು.
ಈಜುವ ಸಂದರ್ಭದಲ್ಲಿ ಕಿರಣ್ ಆಕಸ್ಮಿಕವಾಗಿ ನೀರಿನ ಆಳಕ್ಕೆ ಸಿಲುಕಿ ಮುಳುಗಿದ್ದಾನೆ ಎನ್ನಲಾಗಿದೆ. ಕೂಡಲೇ ಸ್ನೇಹಿತರು ಬೊಬ್ಬೆ ಹಾಕಿದರೂ ಸಹ, ಬಾಲಕ ನೀರಿನಲ್ಲಿ ನಾಪತ್ತೆಯಾಗಿದ್ದಾನೆ.


ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಬಾವಿಯಲ್ಲಿ ಬಾಲಕನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಬಾವಿ ಹೆಚ್ಚು ಆಳವಾಗಿರುವುದರಿಂದ ಶೋಧ ಕಾರ್ಯಕ್ಕೆ ಅಲ್ಪ ಹಿನ್ನಡೆಯಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ.
ಈ ಸಂಬಂಧ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಫಲಿತಾಂಶದ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಈಗ ಮಗನ ನಾಪತ್ತೆಯಿಂದಾಗಿ ಆಕ್ರಂದನ ಮುಗಿಲು ಮುಟ್ಟಿದೆ.
