
ಸುಬ್ರಹ್ಮಣ್ಯ: ಕಷ್ಟಕಾಲದಲ್ಲಿ ಕುಲಬಾಂಧವರ ಕೈಹಿಡಿಯುವ ಕಾರ್ಯಕ್ಕೆ ಮುಂದಾಗಿರುವ ಸುಬ್ರಹ್ಮಣ್ಯ ಗ್ರಾಮ ಒಕ್ಕಲಿಗ ಗೌಡ ಸಮಾಜವು, ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೌಕರನಿಗೆ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದೆ.


ಸುಬ್ರಹ್ಮಣ್ಯ ಗ್ರಾಮದ ಅಗ್ರಹಾರದ ಶಿವಪ್ಪಗೌಡ (ರಾಮಣ್ಣ) ಹಾಗೂ ಜಾನಕಿ ದಂಪತಿಯ ಪುತ್ರರಾಗಿರುವ ರವಿ ಅವರು ಕಳೆದ ಕೆಲವು ಸಮಯದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈಗಾಗಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಅವರು, ಚಿಕಿತ್ಸಾ ವೆಚ್ಚಕ್ಕಾಗಿ ದೊಡ್ಡ ಮೊತ್ತದ ಹಣವನ್ನು ವ್ಯಯಿಸಿದ್ದಾರೆ. ಬಡತನದ ಕುಟುಂಬದವರಾದ ಇವರಿಗೆ ಮುಂದಿನ ಚಿಕಿತ್ಸೆಗಾಗಿ ಆರ್ಥಿಕ ಸಂಕಷ್ಟ ಎದುರಾಗಿತ್ತು.
ಈ ವಿಷಯವನ್ನು ತಿಳಿದ ಸುಬ್ರಹ್ಮಣ್ಯ ಗ್ರಾಮ ಒಕ್ಕಲಿಗ ಗೌಡ ಸಮಾಜದ ಬಾಂಧವರು ಒಗ್ಗೂಡಿ, ರವಿ ಅವರ ಚಿಕಿತ್ಸೆಗಾಗಿ ರೂ. 25,000/- ಮೊತ್ತದ ಧನಸಹಾಯವನ್ನು ಸಂಗ್ರಹಿಸಿದ್ದರು. ಸಮಿತಿಯ ಪದಾಧಿಕಾರಿಗಳು ರವಿ ಅವರ ಮನೆಗೆ ಖುದ್ದಾಗಿ ಭೇಟಿ ನೀಡಿ ಅವರಿಗೆ ಈ ಮೊತ್ತವನ್ನು ಹಸ್ತಾಂತರಿಸಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.


ಧನಸಹಾಯ ಹಸ್ತಾಂತರಿಸುವ ಸಂದರ್ಭದಲ್ಲಿ ಸುಬ್ರಹ್ಮಣ್ಯ ಒಕ್ಕಲಿಗ ಗೌಡ ಗ್ರಾಮ ಸಮಿತಿಯ ಅಧ್ಯಕ್ಷರಾದ ಡಾ. ಎ. ಎ. ತಿಲಕ್, ಕಾರ್ಯದರ್ಶಿ ವಿಶ್ವನಾಥ ನಡುತೋಟ ಸೇರಿದಂತೆ ಸಮಾಜದ ಇತರ ಪ್ರಮುಖರು ಉಪಸ್ಥಿತರಿದ್ದರು ಈ ಕಾರ್ಯಕ್ಕೆ ರವಿ ಅವರ ಕುಟುಂಬಸ್ಥರು ಹಾಗೂ ಸ್ಥಳೀಯ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
