
ರಾಯಚೂರು ಜಿಲ್ಲೆಯ ಆದೋನಿ-ಸಿರುಗುಪ್ಪ ರಸ್ತೆಯಲ್ಲಿ ಕಾರು ಮರಕ್ಕೆ ಡಿಕ್ಕಿಯಾಗಿ ಸುಳ್ಯ ಮೂಲದ ಕ್ಷಿಪ್ರಾ (25) ಮೃತಪಟ್ಟಿದ್ದಾರೆ. ಮದುವೆಗೆ ತೆರಳುತ್ತಿದ್ದ ನಾಲ್ವರು ಸಾಫ್ಟ್ವೇರ್ ಉದ್ಯೋಗಿಗಳ ಕಾರು ಅಪಘಾತಕ್ಕೀಡಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.


ಸ್ನೇಹಿತೆಯ ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ಉತ್ಸಾಹದಿಂದ ಹೊರಟಿದ್ದ ಯುವಕರ ತಂಡವೊಂದಕ್ಕೆ ವಿಧಿ ಅಡ್ಡಬಂದಿದೆ. ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಪರಿಣಾಮ ಸುಳ್ಯ ಮೂಲದ ಯುವತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ಆದೋನಿ-ಸಿರುಗುಪ್ಪ ಮುಖ್ಯ ರಸ್ತೆಯಲ್ಲಿ ಸಂಭವಿಸಿದೆ.
ಮೃತಪಟ್ಟವರ ವಿವರ: ಬೆಂಗಳೂರಿನ ‘ಆಟೋಲೀವ್ ಇಂಡಿಯಾ’ (Autoliv India) ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಸುಳ್ಯ ಮೂಲದ ಕ್ಷಿಪ್ರಾ (25) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ.
ಘಟನೆಯ ವಿವರ: ಕ್ಷಿಪ್ರಾ ಸೇರಿದಂತೆ ಬೆಂಗಳೂರಿನ ಆಟೋಲೀವ್ ಕಂಪನಿಯ ನಾಲ್ವರು ಸಹೋದ್ಯೋಗಿಗಳು ರಾಯಚೂರಿನ ಲಿಂಗಸುಗೂರಿನಲ್ಲಿ ನಡೆಯಲಿರುವ ತಮ್ಮ ಸ್ನೇಹಿತೆ ನಂದಿನಿ ಅವರ ಮದುವೆಗೆಂದು ಶುಕ್ರವಾರ ರಾತ್ರಿ 11 ಗಂಟೆಗೆ ಬೆಂಗಳೂರಿನಿಂದ ಕಾರಿನಲ್ಲಿ ಹೊರಟಿದ್ದರು. ಮಾರ್ಗಮಧ್ಯೆ ಮಂತ್ರಾಲಯದ ರಾಘವೇಂದ್ರ ಸ್ವಾಮಿ ದರ್ಶನ ಪಡೆಯುವ ಉದ್ದೇಶದಿಂದ ಅವರು ತಮ್ಮ ಪ್ರಯಾಣದ ಹಾದಿಯನ್ನು ಬದಲಿಸಿದ್ದರು.
ಶನಿವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಆದೋನಿ-ಸಿರುಗುಪ್ಪ ರಸ್ತೆಯಲ್ಲಿ ಚಲಿಸುತ್ತಿದ್ದಾಗ, ಕಾರು ಚಾಲನೆ ಮಾಡುತ್ತಿದ್ದ ಪ್ರದೀಪ್ ಅವರಿಗೆ ನಿದ್ರೆಯ ಮಂಪರು ಆವರಿಸಿದೆ ಎನ್ನಲಾಗಿದೆ. ಈ ವೇಳೆ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಮರಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಮುಂದಿನ ಸೀಟಿನಲ್ಲಿ ಕುಳಿತಿದ್ದ ಕ್ಷಿಪ್ರಾ ಅವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.


ಮೂವರ ಸ್ಥಿತಿ ಗಂಭೀರ: ಕಾರು ಚಾಲನೆ ಮಾಡುತ್ತಿದ್ದ ಪ್ರದೀಪ್ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಸದ್ಯ ಕೋಮಾ ಸ್ಥಿತ ತಲುಪಿದ್ದಾರೆ ಎಂದು ತಿಳಿದುಬಂದಿದೆ. ಉಳಿದಂತೆ ಕಾರಿನಲ್ಲಿದ್ದ ಅರ್ಪಿತಾ ಮತ್ತು ಶರ್ಮಿಳಾ ಎಂಬುವವರಿಗೂ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಪೊಲೀಸ್ ತನಿಖೆ: ಘಟನಾ ಸ್ಥಳಕ್ಕೆ ಆದೋನಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮದುವೆ ಸಂಭ್ರಮದಲ್ಲಿದ್ದ ನಂದಿನಿ ಮತ್ತು ಮೃತ ಕ್ಷಿಪ್ರಾ ಅವರ ಕುಟುಂಬಸ್ಥರಲ್ಲಿ ಈ ಘಟನೆ ತೀವ್ರ ಶೋಕ ತಂದಿದೆ.
