
ಬೆಳ್ತಂಗಡಿ ಮೂಲದ ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸರು ಪತ್ನಿ ಸೌಮ್ಯ ಶೆಟ್ಟಿಯನ್ನು ಬಂಧಿಸಿದ್ದಾರೆ. ಪತಿಯ ಮೇಲೆ ಹಲ್ಲೆ ಯತ್ನ ಹಾಗೂ ಮಾನಸಿಕ ಕಿರುಕುಳ ನೀಡಿದ ಆರೋಪದಡಿ ಈ ಕ್ರಮ ಕೈಗೊಳ್ಳಲಾಗಿದೆ.


ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಮೃತರ ಪತ್ನಿ ಸೌಮ್ಯ ಶೆಟ್ಟಿ (28) ಅವರನ್ನು ಕಾರ್ಕಳ ಪೊಲೀಸರು ಶನಿವಾರ (ಏಪ್ರಿಲ್ 11) ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಘಟನೆಯ ಹಿನ್ನೆಲೆ:
ಮೂಲತಃ ಪುತ್ತೂರು ನೆಲ್ಯಾಡಿಯವರಾದ ಉದ್ಯಮಿ ಸುದೀಪ್ ರೈ ಹಾಗೂ ಕಾರ್ಕಳ ಕಜೆ ನಿವಾಸಿ, ಪುತ್ತೂರು ಸಬ್ ರಿಜಿಸ್ಟ್ರಾರ್ ಕಚೇರಿ ಉದ್ಯೋಗಿ ಸೌಮ್ಯ ಶೆಟ್ಟಿ ಕಳೆದ ಫೆಬ್ರವರಿ 17ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಮದುವೆಯ ನಂತರ ದಂಪತಿ ಕಾರ್ಕಳ ಜೋಡುರಸ್ತೆಯ ಬಂಗ್ಲೆಗುಡ್ಡೆ ಕಜೆ ಎಂಬಲ್ಲಿ ವಾಸವಿದ್ದರು.
ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿಗಳ ನಡುವೆ ವೈಮನಸ್ಸು ಶುರುವಾಗಿತ್ತು ಎನ್ನಲಾಗಿದೆ. ಮಾರ್ಚ್ 17ರಂದು ಸುದೀಪ್ ತನ್ನ ತಾಯಿಯೊಂದಿಗೆ ಕಾರಿನಲ್ಲಿ ಪೂಜಾ ಕಾರ್ಯಕ್ರಮಕ್ಕಾಗಿ ನೆಲ್ಯಾಡಿಗೆ ತೆರಳುತ್ತಿದ್ದಾಗ, ಸೌಮ್ಯ ಶೆಟ್ಟಿ ಸ್ಕೂಟಿಯಲ್ಲಿ ಬಂದು ಕಾರನ್ನು ಅಡ್ಡಗಟ್ಟಿದ್ದರು. ಈ ವೇಳೆ ಸುದೀಪ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಳು ಎಂದು ಆರೋಪಿಸಲಾಗಿತ್ತು.
ಆತ್ಮಹತ್ಯೆಗೆ ಶರಣಾಗಿದ್ದ ಸುದೀಪ್:
ಈ ಘಟನೆಯ ನಂತರ ತೀವ್ರ ಮಾನಸಿಕ ನೊಂದಿದ್ದ ಸುದೀಪ್ ರೈ, ಮಾರ್ಚ್ 22ರಂದು ಕಾರ್ಕಳದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 24ರಂದು ಅವರು ಕೊನೆಯುಸಿರೆಳೆದಿದ್ದರು.


ತನ್ನ ಮಗನ ಸಾವಿಗೆ ಸೊಸೆ ಸೌಮ್ಯ ಶೆಟ್ಟಿಯೇ ನೇರ ಕಾರಣ. ಆಕೆ ನೀಡಿದ ಮಾನಸಿಕ ಚಿತ್ರಹಿಂಸೆ ಹಾಗೂ ಬೆದರಿಕೆಯಿಂದಲೇ ಸುದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತರ ತಂದೆ ದಾಮೋದರ್ ರೈ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸ್ ತನಿಖೆ ಮತ್ತು ಬಂಧನ:
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರು ಎಪ್ರಿಲ್ 1ರಂದು ತನಿಖೆಯನ್ನು ಕಾರ್ಕಳ ನಗರ ಪೊಲೀಸ್ ಠಾಣಾ ಪ್ರಭಾರ ನಿರೀಕ್ಷಕ ಮಂಜಪ್ಪ ಡಿ.ಆರ್. ಅವರಿಗೆ ವಹಿಸಿದ್ದರು. ಪೊಲೀಸರು ತೀವ್ರ ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿದ ಬಳಿಕ ಶನಿವಾರ ಆರೋಪಿ ಸೌಮ್ಯ ಶೆಟ್ಟಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದ್ದು, ಉದ್ಯಮಿಯ ಸಾವಿನ ಹಿಂದಿನ ಸಂಪೂರ್ಣ ಸತ್ಯಾಸತ್ಯತೆ ಹೊರಬರಬೇಕಿದೆ.
