
ಕಡಬ ತಾಲೂಕಿನ ಕುಂತೂರು ಜಂಕ್ಷನ್ ಬಳಿ ನಾಯಿ ಅಡ್ಡ ಬಂದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಬಿದ್ದಿದ್ದು, ಹಿಂಬದಿ ಸವಾರ ಮಹಮ್ಮದ್ ನಿಯಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


ಕಡಬ: ತಾಲೂಕಿನ ಕುಂತೂರು ಗ್ರಾಮದ ಕುಂತೂರು ಜಂಕ್ಷನ್ ಬಳಿ ಬೈಕ್ ಸವಾರನ ನಿಯಂತ್ರಣ ತಪ್ಪಿ ನಡೆದ ಅಪಘಾತದಲ್ಲಿ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಾರ್ಚ್ 30ರಂದು ನಡೆದಿದೆ.
ಕುಂತೂರು ಗ್ರಾಮದ ಮುಡಿಪಿನಡ್ಕ ನಿವಾಸಿ ಅಬ್ದುಲ್ ರೆಹಮಾನ್ ಅವರು ತಮ್ಮ ಬುಲೆಟ್ ಬೈಕ್ ನಲ್ಲಿ ಮಹಮ್ಮದ್ ನಿಯಾಜ್ (28 ವರ್ಷ) ಎಂಬವರನ್ನು ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಅಲಂಕಾರ ಕಡೆಯಿಂದ ಕುಂತೂರು ಕಡೆಗೆ ಬರುತ್ತಿದ್ದರು. ಬೆಳಿಗ್ಗೆ ಸುಮಾರು 10:30ರ ವೇಳೆಗೆ ಕುಂತೂರು ಜಂಕ್ಷನ್ ತಲುಪಿದಾಗ ರಸ್ತೆಯ ಎಡಭಾಗದಿಂದ ಬಲಭಾಗಕ್ಕೆ ಹಠಾತ್ತಾಗಿ ನಾಯಿಯೊಂದು ಅಡ್ಡ ಬಂದಿದೆ.
ನಾಯಿಯನ್ನು ತಪ್ಪಿಸಲು ಹೋಗಿ ಸವಾರನ ನಿಯಂತ್ರಣ ತಪ್ಪಿದ ಬುಲೆಟ್ ಬೈಕ್ ರಸ್ತೆಗೆ ಉರುಳಿ ಬಿದ್ದಿದೆ. ಈ ಅಪಘಾತದಲ್ಲಿ ಹಿಂಬದಿ ಸವಾರ ಮಹಮ್ಮದ್ ನಿಯಾಜ್ ಅವರ ತಲೆ ಮತ್ತು ಶರೀರಕ್ಕೆ ರಕ್ತಗಾಯಗಳಾಗಿದ್ದು, ಸವಾರ ಅಬ್ದುಲ್ ರೆಹಮಾನ್ ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.


ಸ್ಥಳದಲ್ಲಿದ್ದ ಅಬೂಬಕ್ಕರ್ ಸಿದ್ದೀಕ್ ಹಾಗೂ ಇತರರು ತಕ್ಷಣ ಧಾವಿಸಿ ಗಾಯಾಳುವನ್ನು ಆಟೋರಿಕ್ಷಾ ಮೂಲಕ ಅಲಂಕಾರ ಪೇಟೆಯ ಆಕಾಶ್ ಕ್ಲಿನಿಕ್ಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ಬಗ್ಗೆ ಅಬೂಬಕ್ಕರ್ ಸಿದ್ದೀಕ್ ಅವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 35/2026, ಕಲಂ: 281, 125(a) BNS-2023 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
