
ಕಡಬ: ಕಡಬ ತಾಲೂಕು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಇಂದು ಸಂಜೆ ಗುಡುಗು ಸಹಿತ ಭರ್ಜರಿ ಮಳೆಯಾಗಿದ್ದು, ಹಲವು ಕಡೆಗಳಲ್ಲಿ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಅನಿರೀಕ್ಷಿತ ಗಾಳಿ-ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ.


ವಿದ್ಯುತ್ ಹಾಗೂ ನೆಟ್ವರ್ಕ್ ಸಂಪರ್ಕ ಕಡಿತ
ಆಲಂಕಾರು ಸೇರಿದಂತೆ ವಿವಿಧ ಭಾಗಗಳಲ್ಲಿ ಗಾಳಿ ಮಳೆಯ ಅಬ್ಬರಕ್ಕೆ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿವೆ. ಇದರಿಂದಾಗಿ ವಿದ್ಯುತ್ ಕಂಬಗಳು ಹಾಗೂ ತಂತಿಗಳಿಗೆ ಹಾನಿಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಸಂಪೂರ್ಣ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಮಳೆಯ ಜೊತೆಗೆ ಮೊಬೈಲ್ ನೆಟ್ವರ್ಕ್ ಹಾಗೂ ಇಂಟರ್ನೆಟ್ ಸೇವೆಯಲ್ಲೂ ಭಾರೀ ವ್ಯತ್ಯಯ ಉಂಟಾಗಿದ್ದು, ಸಾರ್ವಜನಿಕರು ಸಂಪರ್ಕ ಸಾಧಿಸಲು ಹರಸಾಹಸ ಪಡುವಂತಾಗಿದೆ.
ಬ್ಯಾನರ್ಗಳು ನೆಲಕ್ಕೆ
ಸ್ಥಳೀಯವಾಗಿ ನಡೆಯುತ್ತಿದ್ದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ರಸ್ತೆ ಬದಿಗಳಲ್ಲಿ ಅಳವಡಿಸಲಾಗಿದ್ದ ಶುಭಾಶಯದ ಬ್ಯಾನರ್ಗಳು ಹಾಗೂ ಹೋರ್ಡಿಂಗ್ಗಳು ಗಾಳಿಯ ವೇಗಕ್ಕೆ ನೆಲಕ್ಕಚ್ಚಿವೆ. ಕೆಲವು ಕಡೆಗಳಲ್ಲಿ ಬ್ಯಾನರ್ಗಳು ರಸ್ತೆಗೆ ಬಿದ್ದು ಸಂಚಾರಕ್ಕೂ ಅಡಚಣೆ ಉಂಟಾದ ಘಟನೆಗಳು ನಡೆದಿವೆ.
ಬೈಕ್ ಸ್ಕಿಡ್ ಆಗಿ ಸವಾರನಿಗೆ ಗಂಭೀರ ಗಾಯ
ಮಳೆಯಿಂದಾಗಿ ರಸ್ತೆ ಜಾರುತ್ತಿದ್ದುದರಿಂದ ನೂಜಿಬಾಳ್ತಿಲ ಗ್ರಾಮದ ಇಚಿಲಂಪಾಡಿ ಬಳಿ ಬೈಕೊಂದು ಸ್ಕಿಡ್ ಆಗಿ ಬಿದ್ದಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರನ ಕಾಲಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.
