ಅಪ್ರಾಪ್ತ ಬಾಲಕನ ಅಪಹರಿಸಿ ಹಲ್ಲೆ ಪ್ರಕರಣ: ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದ ಇಬ್ಬರು ಅರೆಸ್ಟ್

kadaba times

ಬೆಳ್ತಂಗಡಿಯ ಉಜಿರೆಯಲ್ಲಿ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ಹಾಗೂ ಅಪಹರಣ ನಡೆಸಿದ ಆರೋಪದಡಿ ಇಬ್ಬರು ಬಜರಂಗದಳ ಕಾರ್ಯಕರ್ತರ ಬಂಧನ. ಘಟನೆಯ ಸಂಪೂರ್ಣ ವಿವರ ಇಲ್ಲಿದೆ

kadaba times
uniq

ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಗೆಳೆಯರೊಂದಿಗೆ ಬಂದಿದ್ದ 17 ವರ್ಷದ ಮುಸ್ಲಿಂ ಬಾಲಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಉಜಿರೆ ಗ್ರಾಮದ ಪೆರ್ಲ ನಿವಾಸಿ ರಮೇಶ್ ಪೂಜಾರಿ (43) ಮತ್ತು ನಡ ಗ್ರಾಮದ ಸುರ್ಯ ನಿವಾಸಿ ಗೌರವ್ ಶೆಟ್ಟಿ (25) ಎಂದು ಗುರುತಿಸಲಾಗಿದೆ. ಮಾರ್ಚ್ 26ರಂದು ಉಜಿರೆಯ ಅತ್ತಾಜೆಯಲ್ಲಿ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಇಬ್ಬರಿಗೂ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರವಾಗಿ ವಕೀಲ ಸುಬ್ರಹ್ಮಣ್ಯ ಅಗರ್ತ ವಾದ ಮಂಡಿಸಿದ್ದರು.

ಉಜಿರೆಯ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಬಾಲಕ ಮಾರ್ಚ್ 11ರಂದು ತನ್ನ ಸ್ನೇಹಿತರೊಂದಿಗೆ ಬ್ರಹ್ಮಕಲಶೋತ್ಸವಕ್ಕೆ ತೆರಳಿದ್ದನು. ರಾತ್ರಿ 8.30ರ ಸುಮಾರಿಗೆ ಆತನ ಸ್ನೇಹಿತರು ಜಾಯೆಂಟ್ ವೀಲ್ ಹತ್ತಿದ್ದಾಗ, ಅವರ ಮೊಬೈಲ್ ಹಿಡಿದು ಕೆಳಗೆ ನಿಂತಿದ್ದ ಬಾಲಕನನ್ನು ಆರೋಪಿಗಳು ಪ್ರಶ್ನಿಸಿ   ಆತನ ಮೇಲೆ ಏಕಾಏಕಿ ಮುಗಿಬಿದ್ದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಜನಸಂದಣಿಯ ಲಾಭ ಪಡೆದ ಆರೋಪಿಗಳ ತಂಡ ಬಾಲಕನನ್ನು ಬೈಕ್‌ನಲ್ಲಿ ಅಪಹರಿಸಿ, ಸುಮಾರು 5 ಕಿ.ಮೀ ದೂರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹತ್ತಕ್ಕೂ ಹೆಚ್ಚು ಮಂದಿ ನಿರಂತರವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

kadaba times
kadaba times

“ಬಾಲಕನ ವಿಡಿಯೋ ಚಿತ್ರೀಕರಿಸಿದಲ್ಲದೆ ತಡರಾತ್ರಿ ಬಾಲಕನನ್ನು ಉಜಿರೆಯ ಸಾಯಿರಾಂ ಕಟ್ಟಡದ ಬಳಿ ಬಿಟ್ಟು, ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಆತ್ಮಹತ್ಯೆಗೆ ಮುಂದಾಗಿದ್ದ ಬಾಲಕ:

ಹಲ್ಲೆ ಮತ್ತು ಬೆದರಿಕೆಯಿಂದ ತೀವ್ರ ಖಿನ್ನತೆಗೊಳಗಾಗಿದ್ದ ಬಾಲಕ ಮನೆಯವರಿಗೆ ವಿಷಯ ತಿಳಿಸಿರಲಿಲ್ಲ. ಆದರೆ, ಆರೋಪಿ ಗೌರವ್ ಶೆಟ್ಟಿ ನಿರಂತರವಾಗಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದನು. ಬಾಲಕ ಕರೆ ಸ್ವೀಕರಿಸದಿದ್ದಾಗ “ಮನೆಗೆ ಬರುವುದಾಗಿ” ಮೆಸೇಜ್ ಕಳುಹಿಸಿದ್ದನು. ಇದರಿಂದ ಹೆದರಿದ ಬಾಲಕ ಮೂರು ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ನಿರ್ಧರಿಸಿದ್ದನು. ಅದೃಷ್ಟವಶಾತ್ ಡೆತ್ ನೋಟ್ ಮನೆಯವರ ಕೈಗೆ ಸಿಕ್ಕಿದ್ದು, ವಿಚಾರಿಸಿದಾಗ ಸಂಪೂರ್ಣ ಸತ್ಯ ಹೊರಬಂದಿದೆ.

ಬಾಲಕನ ತಂದೆ ಮಾರ್ಚ್ 18ರಂದು ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಲ್ಲೆ, ಕೊಲೆ ಬೆದರಿಕೆ, ಅಪಹರಣ ಹಾಗೂ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಡಿ BNS 137(2), 115(2), 351(2), 352, 353(2) ಕಲಂಗಳಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Related Articles

Latest Articles