
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಲೆದಾಡುತ್ತಿದ್ದ ಇಬ್ಬರು ನಿರಾಶ್ರಿತರನ್ನು ಗ್ರಾಮ ಪಂಚಾಯತ್, ದೇವಸ್ಥಾನ ಹಾಗೂ ರವಿ ಕಕ್ಕೆಪದವು ಟ್ರಸ್ಟ್ ಸಹಕಾರದೊಂದಿಗೆ ಮಂಗಳೂರಿನ ಪಚ್ಚನಾಡಿ ನಿರಾಶ್ರಿತರ ಕೇಂದ್ರಕ್ಕೆ ಸೇರಿಸಲಾಗಿದೆ.


ಕುಕ್ಕೆ ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಪುಣ್ಯಕ್ಷೇತ್ರದಲ್ಲಿ ಕಳೆದ ಕೆಲವು ದಿನಗಳಿಂದ ಅಲೆದಾಡುತ್ತಿದ್ದ ಇಬ್ಬರು ಅಸಹಾಯಕ ನಿರಾಶ್ರಿತರನ್ನು ಮಾರ್ಚ್ 13ರಂದು ಮಂಗಳೂರಿನ ಪಚ್ಚನಾಡಿಯ ಭಿಕ್ಷುಕರ ನಿರಾಶ್ರಿತರ ಕೇಂದ್ರಕ್ಕೆ ಸುರಕ್ಷಿತವಾಗಿ ಸೇರಿಸುವ ಮೂಲಕ ಮಾನವೀಯತೆ ಮೆರೆಯಲಾಗಿದೆ.
ಸುಬ್ರಹ್ಮಣ್ಯದ ರಥಬೀದಿಯಲ್ಲಿ ವ್ಯಕ್ತಿಯೋರ್ವರು ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಾ, ಸಾರ್ವಜನಿಕ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತಾ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರು. ಇವರೊಂದಿಗೆ ಕಳೆದ ಕೆಲವು ಸಮಯದಿಂದ ಕ್ಷೇತ್ರದಲ್ಲೇ ಅಲೆದಾಡುತ್ತಿದ್ದ ವೃದ್ಧೆಯೊಬ್ಬರನ್ನೂ ಗುರುತಿಸಿ, ಅವರಿಬ್ಬರಿಗೂ ಸೂಕ್ತ ನೆಲೆ ಕಲ್ಪಿಸಲು ಸ್ಥಳೀಯ ಆಡಳಿತ ನಿರ್ಧರಿಸಿತು.


ಈ ಮಾನವೀಯ ಕಾರ್ಯವು ಹಲವು ಇಲಾಖೆಗಳ ಸಮನ್ವಯದೊಂದಿಗೆ ಯಶಸ್ವಿಯಾಗಿ ನಡೆಯಿತು. ನಿರಾಶ್ರಿತರನ್ನು ಕರೆದೊಯ್ಯಲು ದೇವಾಲಯದ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು,ಸ್ಥಳೀಯ ಆಡಳಿತವು ಸಂಪೂರ್ಣ ಮೇಲ್ವಿಚಾರಣೆ ನಡೆಸಿತು.ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನಿರಾಶ್ರಿತರ ರಕ್ಷಣೆ ಮತ್ತು ಪುನರ್ವಸತಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತು.ಪೊಲೀಸ್ ಇಲಾಖೆಯು ಭದ್ರತೆ ಮತ್ತು ಕಾನೂನಾತ್ಮಕ ಪ್ರಕ್ರಿಯೆಗಳಿಗೆ ಸಹಕರಿಸಿತು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾ.ಪಂ. ಆಡಳಿತಾಧಿಕಾರಿ ಶ್ರೀಕಾಂತ್, ಪಿಡಿಒ ಮಹೇಶ್, ಕಾರ್ಯದರ್ಶಿ ಮೋನಪ್ಪ ಡಿ., ಸಮಾಜ ಸೇವಕ ರವಿ ಕಕ್ಕೆಪದವು ಹಾಗೂ ಪಂಚಾಯತ್ ಸಿಬ್ಬಂದಿಗಳು ಮತ್ತು ಪೊಲೀಸ್ ಇಲಾಖೆಯವರು ಉಪಸ್ಥಿತರಿದ್ದು ಸಹಕರಿಸಿದರು. ಅನಾಥವಾಗಿ ಅಲೆಯುತ್ತಿದ್ದವರಿಗೆ ಗೌರವಯುತ ಬದುಕು ನೀಡಲು ಶ್ರಮಿಸಿದ ಈ ತಂಡದ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ
