
ಧರ್ಮಸ್ಥಳ: ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ 2022ರಲ್ಲಿ ನಡೆದಿದ್ದ ದಲಿತ ಯುವಕ ಶ್ರೀಧರ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (SIT) ಮಾರ್ಚ್ 2ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ಭೇಟಿ ನೀಡಿ, ಪ್ರಕರಣದ ಮರು ತನಿಖೆಯನ್ನು ಅಧಿಕೃತವಾಗಿ ಆರಂಭಿಸಿದೆ.


ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಿವಾಸಿಯಾಗಿದ್ದ ಶ್ರೀಧರ (30 ವ.) ಅವರು ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿರುವ ಎ.ಸಿ. ಕುರಿಯನ್ ಅವರ ಮಾಲೀಕತ್ವದ ‘ಸಾರ ಫಾರ್ಮ್’ನಲ್ಲಿ ಕೆಲಸಕ್ಕಿದ್ದರು. ಫೆಬ್ರವರಿ 18, 2022ರಂದು ತೋಟದಲ್ಲಿ ಶ್ರೀಧರ ಅವರ ಮೃತದೇಹ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಕುರಿತು ಫಾರ್ಮ್ ಮೇಲ್ವಿಚಾರಕ ಹರೀಶ್ ಮೊಗೇರ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಕೊಲೆ (IPC 302) ಹಾಗೂ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಆರಂಭದಲ್ಲಿ ತನಿಖೆ ನಡೆಸಿದ್ದ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಅವರು, ಆರೋಪಿಗಳು ಕೊಲೆ ಮಾಡಿದ್ದಾರೆ ಎನ್ನಲು ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣ ನೀಡಿ, ಪ್ರಮುಖ ಕಲಂಗಳನ್ನು ಕೈಬಿಟ್ಟಿದ್ದರು. ಕೇವಲ ಸಾಮಾನ್ಯ ಹಲ್ಲೆ (IPC 323) ಪ್ರಕರಣವಾಗಿ ಇದನ್ನು ಪರಿಗಣಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಪೊಲೀಸರ ಈ ಕ್ರಮಕ್ಕೆ ದೂರುದಾರ ಹರೀಶ್ ಮೊಗೇರ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ನ್ಯಾಯಕ್ಕಾಗಿ ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿದ ಹೈಕೋರ್ಟ್, ಮರು ತನಿಖೆಯನ್ನು ಎಸ್ಐಟಿಗೆ ಹಸ್ತಾಂತರಿಸುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಡಿಜಿಪಿ ಡಾ. ಎಂ.ಎ. ಸಲೀಂ ಅವರು ಫೆಬ್ರವರಿ 20ರಂದು ಎಸ್ಐಟಿ ರಚಿಸಿ ಆದೇಶ ಹೊರಡಿಸಿದ್ದರು.


ತನಿಖಾ ತಂಡದ ವಿವರ: ತನಿಖಾಧಿಕಾರಿಯಾಗಿ ಡಿವೈಎಸ್ಪಿ ಹರೀಶ್ ಎಂ.ಆರ್, ತಂಡದಲ್ಲಿ ಇನ್ಸ್ಪೆಕ್ಟರ್ ಡಾ. ನವೀನ್ ಕುಮಾರ್, ಸಬ್ ಇನ್ಸ್ಪೆಕ್ಟರ್ ಪುನೀತ್ ಸೇರಿದಂತೆ 10 ಸಿಬ್ಬಂದಿಗಳು ಇದ್ದಾರೆ. ಮಾರ್ಚ್ 2ರಂದು ಬೆಳಿಗ್ಗೆ ಧರ್ಮಸ್ಥಳ ಠಾಣೆಗೆ ಆಗಮಿಸಿದ ಈ ತಂಡವು, ಮೊದಲ ಹಂತದ ಸಭೆ ನಡೆಸಿ ಹಳೆಯ ದಾಖಲೆಗಳನ್ನು ಪರಿಶೀಲಿಸಿತು.
ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದ ತಂಡವು ಶೀಘ್ರದಲ್ಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳ ಮರು ಸಂಗ್ರಹ ನಡೆಸುವ ಸಾಧ್ಯತೆಯಿದೆ.ಬಡ ದಲಿತ ಯುವಕನ ಸಾವಿಗೆ ನ್ಯಾಯ ಸಿಗಬೇಕು ಎಂಬ ಹೋರಾಟಕ್ಕೆ ಈಗ ಎಸ್ಐಟಿ ತನಿಖೆಯ ಮೂಲಕ ಹೊಸ ಭರವಸೆ ಮೂಡಿದೆ.
