ಸುಳ್ಯ ವಿಧಾನ ಸಭಾ ಕ್ಷೇತ್ರ- 3 ಕಿ.ಮೀ. ರಸ್ತೆ ಕಳೆದ 40 ವರ್ಷಗಳಿಂದ ಡಾಮರೀಕರಣ ಆಗಲೇ ಇಲ್ಲ: ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕರಿಸುವುದಾಗಿ ಘೋಷಿಸಿ ಬ್ಯಾನರ್ ಅಳವಡಿಕೆ

kadaba times

ಸುಳ್ಯದ ಅಜ್ಜಾವರ ಗ್ರಾಮದ ಶಿರಾಜೆ-ಬೀನಡ್ಕ ನಿವಾಸಿಗಳು ರಸ್ತೆ ಮತ್ತು ನೀರಿನ ಸೌಲಭ್ಯಕ್ಕಾಗಿ ಆಗ್ರಹಿಸಿ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. 40 ವರ್ಷಗಳ ನಿರ್ಲಕ್ಷ್ಯದ ವಿರುದ್ಧ ಬ್ಯಾನರ್ ಅಳವಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

kadaba times
uniq

ಸುಳ್ಯ: “ಸರಕಾರಗಳು ಬದಲಾದರೂ ನಮ್ಮ ಊರಿನ ರಸ್ತೆ ಮಾತ್ರ ಬದಲಾಗಿಲ್ಲ. ಸುಳ್ಳು ಆಶ್ವಾಸನೆ ನೀಡಿ ಮತ ಪಡೆಯುವ ರಾಜಕಾರಣಿಗಳಿಗೆ ಈ ಬಾರಿ ನಮ್ಮ ಮತವಿಲ್ಲ!” – ಇದು ಸುಳ್ಯ ವಿಧಾನಸಭಾ ಕ್ಷೇತ್ರದ ಅಜ್ಜಾವರ ಗ್ರಾಮದ ಶಿರಾಜೆ ಮತ್ತು ಬೀನಡ್ಕ ನಾಗರಿಕರ ಆಕ್ರೋಶ ನುಡಿಗಳು.

ತಮ್ಮ ದಶಕಗಳ ಬೇಡಿಕೆಯನ್ನು ನಿರ್ಲಕ್ಷಿಸಿರುವ ಜನಪ್ರತಿನಿಧಿಗಳ ವಿರುದ್ಧ ಸಿಡಿದೆದ್ದಿರುವ ಈ ಭಾಗದ ಗ್ರಾಮಸ್ಥರು, ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿ ಬ್ಯಾನರ್ ಅಳವಡಿಸಿದ್ದಾರೆ.

40 ವರ್ಷಗಳ ಸುದೀರ್ಘ ಕಾಯುವಿಕೆ: ಅಜ್ಜಾವರ ಗ್ರಾಮದ ಶಿರಾಜೆ 2ನೇ ವಾರ್ಡ್‌ನ ಅಡ್ಡರಸ್ತೆಯಿಂದ ಬೇಲ್ಯ 4ನೇ ವಾರ್ಡ್‌ನ ಬೀನಡ್ಕದವರೆಗೆ ಸುಮಾರು 3 ಕಿ.ಮೀ. ರಸ್ತೆ ಕಳೆದ 40 ವರ್ಷಗಳಿಂದ ಡಾಮರೀಕರಣಗೊಳ್ಳದೆ ದುಸ್ಥಿತಿಯಲ್ಲಿದೆ. ಪ್ರತಿ ಚುನಾವಣೆಯ ವೇಳೆಯೂ ಅಭಿವೃದ್ಧಿಯ ಭರವಸೆ ಸಿಗುತ್ತದೆಯೇ ಹೊರತು, ಮತದಾನ ಮುಗಿದ ನಂತರ ಯಾವೊಬ್ಬ ಜನಪ್ರತಿನಿಧಿಯೂ ಇತ್ತ ಮುಖ ಮಾಡಿಲ್ಲ ಎಂಬುದು ಸ್ಥಳೀಯರ ಗಂಭೀರ ಆರೋಪವಾಗಿದೆ.

kadaba times
kadaba times

ಬ್ಯಾನರ್‌ನಲ್ಲಿ ಏನಿದೆ?:“ಸೌಲಭ್ಯ ವಂಚಿತ ಶಿರಾಜೆ, ಬೇಲ್ಯ ಬೀನಡ್ಕ ನಾಗರೀಕರು” ಹೆಸರಿನಲ್ಲಿ ಹಾಕಲಾಗಿರುವ ಬ್ಯಾನರ್ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲಿ ರಾಜಕಾರಣಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದ್ದು:”40 ವರ್ಷಗಳಿಂದ ರಸ್ತೆ ಡಾಮರೀಕರಣಕ್ಕೆ ಬೇಡಿಕೆ ಇಟ್ಟಿದ್ದರೂ ಹಾಗೂ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ದೊರಕದೇ ಇದ್ದರೂ, ಕೇವಲ ಸುಳ್ಳು ಆಶ್ವಾಸನೆ ನೀಡಿ ಮತ ಯಾಚಿಸಲು ಬರುವ ರಾಜಕಾರಣಿಗಳಿಗೆ ಧಿಕ್ಕಾರ. ನಮ್ಮನ್ನು ಕಡೆಗಣಿಸಿದರೆ ಮುಂದಿನ ಚುನಾವಣೆಯನ್ನು ಕಡ್ಡಾಯವಾಗಿ ಬಹಿಷ್ಕರಿಸುತ್ತೇವೆ.” ಎಂದು ಎಚ್ಚರಿಸಿದ್ದಾರೆ.

ಸಂಕಷ್ಟದಲ್ಲಿ ಗ್ರಾಮಸ್ಥರು: ಪ್ರಸ್ತುತ ಇರುವ 3 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ತುರ್ತು ಸಂದರ್ಭಗಳಲ್ಲಿ ಅಂಬ್ಯುಲೆನ್ಸ್ ಅಥವಾ ಇತರ ವಾಹನಗಳ ಸಂಚಾರಕ್ಕೆ ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯೂ ಗ್ರಾಮಸ್ಥರನ್ನು ಹೈರಾಣಾಗಿಸಿದೆ. ಹತ್ತಾರು ಬಾರಿ ಮನವಿ ನೀಡಿದರೂ ಕೇವಲ ‘ಭರವಸೆ’ ಮಾತ್ರ ಸಿಕ್ಕಿರುವುದು ನಾಗರಿಕರ ನೋವಿಗೆ ಕಾರಣವಾಗಿದೆ.

ರಾಜಕೀಯ ವಲಯದಲ್ಲಿ ಸಂಚಲನ: ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಗ್ರಾಮಸ್ಥರು ಒಗ್ಗಟ್ಟಾಗಿ ಕೈಗೊಂಡಿರುವ ಈ ನಿರ್ಧಾರವು ಸುಳ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕಾಂಕ್ರೀಟ್ ಕ್ರಮ ಕೈಗೊಳ್ಳದಿದ್ದರೆ, ಮತದಾನ ಬಹಿಷ್ಕಾರದ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ನಾಗರಿಕರು ಪಟ್ಟು ಹಿಡಿದಿದ್ದಾರೆ.

Related Articles

Latest Articles