
ಕಡಬ ತಾಲೂಕಿನ ಕೊಂಬಾರು ಸುತ್ತಮುತ್ತ ಮಳೆ ಬಿದ್ದ ನಂತರ ಹಳದಿ ಚುಕ್ಕೆಗಳು ಕಂಡುಬಂದಿವೆ. ಇದು ಸಸ್ಯಗಳ ಪರಾಗವೇ ಅಥವಾ ವಾತಾವರಣದ ಬದಲಾವಣೆಯೇ? ಸಂಪೂರ್ಣ ಮಾಹಿತಿ ಇಲ್ಲಿದೆ.


ಕಡಬ: ತಾಲೂಕಿನ ಕೊಂಬಾರು, ಸಿರಿಬಾಗಿಲು ಮತ್ತು ಕೈಕಂಬ ಪರಿಸರದಲ್ಲಿ ಗುರುವಾರ ರಾತ್ರಿ ಸುರಿದ ತುಂತುರು ಮಳೆಯ ನಂತರ ಸಾರ್ವಜನಿಕರಲ್ಲಿ ಭಾರೀ ಕುತೂಹಲ ಹಾಗೂ ಆತಂಕ ಮನೆಮಾಡಿದೆ. ಮಳೆಹನಿ ಬಿದ್ದ ಜಾಗಗಳಲ್ಲೆಲ್ಲಾ ಅಚ್ಚ ಹಳದಿ ಬಣ್ಣದ ಚುಕ್ಕೆಗಳು ಕಂಡುಬಂದಿರುವುದೇ ಇದಕ್ಕೆ ಕಾರಣ.
ಘಟನೆಯ ವಿವರ: ಗುರುವಾರ ರಾತ್ರಿ ಈ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಶುಕ್ರವಾರ ಬೆಳಿಗ್ಗೆ ಜನರು ಗಮನಿಸಿದಾಗ ಮನೆಯ ಅಂಗಳ, ಗಿಡಮರಗಳ ಎಲೆಗಳು ಹಾಗೂ ಒಣಗಲು ಹಾಕಿದ್ದ ಬಟ್ಟೆಗಳ ಮೇಲೆ ಸಣ್ಣ ಗಾತ್ರದ ಹಳದಿ ಚುಕ್ಕೆಗಳು ಬಿದ್ದಿರುವುದು ಕಂಡುಬಂದಿದೆ. ಈ ಚುಕ್ಕೆಗಳು ಒಣಗಿದ ನಂತರ ಹತ್ತಿಯಿಂದ ಒರೆಸಿದಾಗ ಹಳದಿ ಬಣ್ಣದ ಪುಡಿಯಂತೆ ಗೋಚರಿಸುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವೈಜ್ಞಾನಿಕ ಸಾಧ್ಯತೆಗಳು: ಪರಿಸರ ತಜ್ಞರ ಪ್ರಕಾರ, ಇದು ಕೇವಲ ನೈಸರ್ಗಿಕ ಪ್ರಕ್ರಿಯೆಯಾಗಿರುವ ಸಾಧ್ಯತೆ ಹೆಚ್ಚು.ಪರಾಗ ರೇಣುಗಳು (Pollen Rain): ಮಳೆ ಸುರಿಯುವ ಸಂದರ್ಭದಲ್ಲಿ ಗಾಳಿಯಲ್ಲಿದ್ದ ಸಸ್ಯಗಳ ಪರಾಗ ರೇಣುಗಳು ಮಳೆಹನಿಯೊಂದಿಗೆ ಬೆರೆತು ಕೆಳಗೆ ಬಿದ್ದಾಗ ಇಂತಹ ಹಳದಿ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಹವಾಮಾನದಲ್ಲಾಗುವ ದಿಢೀರ್ ಬದಲಾವಣೆ ಅಥವಾ ಗಾಳಿಯಲ್ಲಿರುವ ಧೂಳಿನ ಕಣಗಳು ಮಳೆಯೊಂದಿಗೆ ಸೇರಿದಾಗಲೂ ಬಣ್ಣ ಬದಲಾಗುವ ಸಾಧ್ಯತೆ ಇರುತ್ತದೆ.


ವಿಷಯ ತಿಳಿಯುತ್ತಿದ್ದಂತೆಯೇ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಟ್ಟೆ ಮತ್ತು ಎಲೆಗಳ ಮೇಲೆ ಬಿದ್ದಿರುವ ಹಳದಿ ಬಣ್ಣದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ವರದಿ ಬಂದ ನಂತರವಷ್ಟೇ ನಿಖರ ಕಾರಣ ತಿಳಿಯಲಿದೆ,” ಎಂದು ಅಧಿಕಾರಿಗಳು ಜನರಿಗೆ ಭರವಸೆ ನೀಡಿದ್ದಾರೆ.
