
ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಮೊಗ್ರು ಅರಣ್ಯ ಪ್ರದೇಶದಲ್ಲಿ ಅಖಿಲ ಭಾರತ ಹುಲಿ ಗಣತಿ-2026ರ ಸಮೀಕ್ಷೆ ನಡೆಸುತ್ತಿದ್ದ ನೌಕರ ಶೇಷಪ್ಪ ಅವರ ಮೇಲೆ ಕಾಡುಹಂದಿ ದಾಳಿ ನಡೆಸಿದ ಘಟನೆ ವರದಿಯಾಗಿದೆ.


ನೆಲ್ಯಾಡಿ: ಅಖಿಲ ಭಾರತ ಹುಲಿ ಗಣತಿ-2026ರ ಎರಡನೇ ಹಂತದ ಸಮೀಕ್ಷೆ ಭರದಿಂದ ಸಾಗುತ್ತಿರುವ ಬೆನ್ನಲ್ಲೇ, ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸುತ್ತಿದ್ದ ಸಿಬ್ಬಂದಿಯೊಬ್ಬರ ಮೇಲೆ ಕಾಡುಹಂದಿ ದಾಳಿ ನಡೆಸಿ ಗಾಯಗೊಳಿಸಿರುವ ಆತಂಕಕಾರಿ ಘಟನೆ ವರದಿಯಾಗಿದೆ.
ಉಪ್ಪಿನಂಗಡಿ ವಲಯದ ಮೊಗ್ರು ಅರಣ್ಯ ಬೀಟ್ನಲ್ಲಿ ಫೆಬ್ರವರಿ 16ರ ಸೋಮವಾರದಂದು ಎರಡನೇ ಹಂತದ ಸಮೀಕ್ಷಾ ಕಾರ್ಯ ಆರಂಭಗೊಂಡಿತ್ತು. ಈ ಸಂದರ್ಭದಲ್ಲಿ ಮೊಗ್ರು ಬ್ಲಾಕ್ನ ಕಲ್ಲಮಾಡು ಆಲಮಟ್ಟಿ ಪ್ಲಾಂಟೇಶನ್ ಸಮೀಪ ಗಸ್ತು ಅರಣ್ಯ ಪಾಲಕಿಯವರೊಂದಿಗೆ ಸಮೀಕ್ಷೆಗೆ ತೆರಳಿದ್ದ ಅರಣ್ಯ ಇಲಾಖೆಯ ದಿನಗೂಲಿ ನೌಕರ ಶೇಷಪ್ಪ ಎಂಬವರ ಮೇಲೆ ಕಾಡುಹಂದಿಯೊಂದು ಹಠಾತ್ ದಾಳಿ ನಡೆಸಿದೆ. ಘಟನೆಯಲ್ಲಿ ಶೇಷಪ್ಪ ಅವರು ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈಗಾಗಲೇ ಮೊದಲ ಹಂತದ ಹುಲಿ ಗಣತಿ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಫೆಬ್ರವರಿ 16ರಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಎರಡನೇ ಹಂತದ ಸಮೀಕ್ಷೆ ನಡೆಯುತ್ತಿದೆ. ಪ್ರತಿ ಅರಣ್ಯ ಬೀಟ್ನಲ್ಲಿ ಬೆಳಿಗ್ಗೆ ಹಾಗೂ ಸಂಜೆ ಒಟ್ಟು ನಾಲ್ಕು ಕಿಲೋಮೀಟರ್ ಉದ್ದದ ಮಾರ್ಗದಲ್ಲಿ ಸಿಬ್ಬಂದಿಗಳು ಸಂಚರಿಸುತ್ತಿದ್ದಾರೆ. ಈ ಹಂತದಲ್ಲಿ ಜಿಂಕೆ, ಸಾಂಬಾರ್, ಕಾಟಿ ಹಾಗೂ ಕಾಡುಹಂದಿ ಸೇರಿದಂತೆ ಸಸ್ಯಹಾರಿ ಪ್ರಾಣಿಗಳ ನೇರ ವೀಕ್ಷಣೆ, ಅವುಗಳ ಪಾದಚಿಹ್ನೆಗಳು ಮತ್ತು ವಾಸಸ್ಥಳದ ಸ್ಥಿತಿಗತಿಗಳನ್ನು ದಾಖಲಿಸುವ ಕಾರ್ಯ ನಡೆಯುತ್ತಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.


ಆದರೆ, ದಟ್ಟ ಅರಣ್ಯದ ನಡುವೆ ನಡೆಯುತ್ತಿರುವ ಈ ಸಮೀಕ್ಷಾ ಕಾರ್ಯದಲ್ಲಿ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣಾ ಸಾಧನಗಳು ಮತ್ತು ಸುರಕ್ಷತಾ ಮಾರ್ಗಸೂಚಿಗಳ ಕೊರತೆ ಇರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಜನವರಿ 5 ರಿಂದ ಮೂರು ದಿನಗಳ ಕಾಲ ನಡೆದ ಮೊದಲ ಹಂತದ ಸಮೀಕ್ಷೆಯಲ್ಲಿ 18 ತಂಡಗಳನ್ನು ರಚಿಸಿ, ಹುಲಿ, ಚಿರತೆ, ಕಾಡು ನಾಯಿ, ನರಿ ಹಾಗೂ ಆನೆಗಳ ಹೆಜ್ಜೆಗುರುತುಗಳನ್ನು ದಾಖಲಿಸಲಾಗಿತ್ತು.
ದಟ್ಟ ಅರಣ್ಯದ ಅಪಾಯ, ಸಿಬ್ಬಂದಿ ಕೊರತೆ ಮತ್ತು ಸಂವಹನ ಸಾಧನಗಳ ಅಭಾವದ ನಡುವೆಯೂ ಸಿಬ್ಬಂದಿಗಳು ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದು, ಅರಣ್ಯ ಇಲಾಖೆಯು ಸಿಬ್ಬಂದಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.
