ಕಡಬ ಸೈಂಟ್ ಆನ್ಸ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಜೇಸಿಐ ಕಾರ್ಯಾಗಾರ

ತರಬೇತಿಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕ

kadaba times

ಕಡಬದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೇಸಿಐ ಕಡಬ ಕದಂಬ ವತಿಯಿಂದ ವಿದ್ಯಾರ್ಥಿಗಳಿಗಾಗಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು. ವ್ಯಕ್ತಿತ್ವ ವಿಕಸನದಲ್ಲಿ ತರಬೇತಿಯ ಮಹತ್ವದ ಕುರಿತು ಪ್ರಾಂಶುಪಾಲ ವಂ. ಸುನಿಲ್ ಪ್ರವೀಣ್ ಪಿಂಟೋ ಮಾತನಾಡಿದರು.

kadaba times
uniq

ಕಡಬ: “ತರಬೇತಿಗಳು ಮನುಷ್ಯನ ವ್ಯಕ್ತಿತ್ವದಲ್ಲಿ ಪರಿಪೂರ್ಣತೆಯನ್ನು ಕಾಣಲು ಸಹಕಾರಿಯಾಗಿದೆ. ಆದುದರಿಂದ ವಿದ್ಯಾರ್ಥಿಗಳು ಇಂತಹ ತರಬೇತಿಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು” ಎಂದು ಕಡಬದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂ. ಸುನಿಲ್ ಪ್ರವೀಣ್ ಪಿಂಟೋ ಅವರು ಅಭಿಪ್ರಾಯಪಟ್ಟರು.

ಜೇಸಿಐ ಕಡಬ ಕದಂಬ ಹಾಗೂ ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸೈಂಟ್ ಜೋಕಿಂ ಚರ್ಚ್ ಸಭಾಭವನದಲ್ಲಿ ಆಯೋಜಿಸಲಾಗಿದ್ದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗುರಿಯತ್ತ ಸಾಗಲು ಗುರುವಿನ ಮಾರ್ಗದರ್ಶನ ಅಗತ್ಯ: ಯಾವುದೇ ವ್ಯಕ್ತಿ ತನ್ನ ಗುರಿಯನ್ನು ತಲುಪಲು ಸಮರ್ಥವಾದ ಗುರುವನ್ನು ಹೊಂದಿರಬೇಕು. ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆಯುವ ಜನರು ತಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ. ಗುರು-ಹಿರಿಯರು ತೋರಿಸುವ ಮಾರ್ಗದಲ್ಲಿ ಮುನ್ನಡೆದು ಜೀವನದಲ್ಲಿ ಸಾಧನೆ ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.

kadaba times
kadaba times

ಆತ್ಮವಿಶ್ವಾಸವೇ ಯಶಸ್ಸಿನ ಮೆಟ್ಟಿಲು: ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ತರಬೇತಿ ನೀಡಿದ ಜೇಸಿ ವಲಯ ತರಬೇತುದಾರ ಸುಹಾಸ್ ಮರಿಕೆ ಮಾತನಾಡಿ, “ಜೀವನವನ್ನು ಸಮರ್ಥವಾಗಿ ಎದುರಿಸಲು ಆತ್ಮವಿಶ್ವಾಸ ಅತಿ ಮುಖ್ಯ. ನಮ್ಮಲ್ಲಿ ಜ್ಞಾನ ವೃದ್ಧಿಯಾದಾಗ ಮಾತ್ರ ಆತ್ಮವಿಶ್ವಾಸ ಮೂಡಲು ಸಾಧ್ಯ. ನಿರಂತರ ಕಲಿಕೆಯಿಂದ ಜ್ಞಾನ ವೃದ್ಧಿಯಾಗುತ್ತದೆ. ಕಲಿಕೆಯ ಬಗ್ಗೆ ಶ್ರದ್ಧೆ ಮತ್ತು ಪರಿಶ್ರಮ ಇದ್ದಾಗ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಲಭಿಸುತ್ತದೆ” ಎಂದರು.

ಕಾರ್ಯಕ್ರಮದಲ್ಲಿ ಜೇಸಿಐ ವಲಯ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ, ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್. ಕೆ., ಘಟಕದ ನಿಕಟಪೂರ್ವ ಅಧ್ಯಕ್ಷೆ ವಿಶ್ರುತ ರಾಜೇಶ್, ಪದಾಧಿಕಾರಿ ನವ್ಯ ಕೃಷ್ಣ, ಯುವ ಜೇಸಿ ಅಧ್ಯಕ್ಷೆ ಶಾಲಿನಿ ಪಿಂಟೋ ಹಾಗೂ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಜೇಸಿ ಘಟಕದ ಅಧ್ಯಕ್ಷ ಜೇಮ್ಸ್ ಕೃಷಲ್ ಡಿ ಸೋಜಾ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ಅಬ್ದುಲ್ ರಹಿಮಾನ್ ವಂದಿಸಿದರು.

Related Articles

Latest Articles