
ಕಡಬದಲ್ಲಿ ಕಂದಾಯ ನಿರೀಕ್ಷಕರೊಬ್ಬರು ಕೆಲಸ ಮಾಡಿಕೊಡಲು ಲಂಚ ಪಡೆಯುತ್ತಿರುವ ವಿಡಿಯೋ ಬಹಿರಂಗ. ಅಧಿಕಾರಿಗಳ ವಿಳಂಬ ನೀತಿ ಮತ್ತು ಜನರ ಅಳೆದಾಟದ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಪ್ರತಿಭಟನೆ ಹಾಗೂ ದೂರು.


ಕಡಬ: ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಳ್ಳಲು ಸಾರ್ವಜನಿಕರು ಹೈರಾಣಾಗುತ್ತಿರುವ ನಡುವೆಯೇ, ಕಡಬ ತಾಲೂಕಿನ ಕಂದಾಯ ನಿರೀಕ್ಷಕರೊಬ್ಬರು (Revenue Inspector) ಲಂಚ ಪಡೆಯುವಾಗ ಸಿಕ್ಕಿಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ.
ಪ್ರಕರಣದ ವಿವರ: ಕಡಬ ತಾಲೂಕಿನ 10 ಸೆಂಟ್ಸ್ ಭೂಮಿಯ ಕನ್ವರ್ಷನ್ (Conversion) ಪತ್ರಕ್ಕೆ ಸಹಿ ಹಾಕಲು ಸಂಬಂಧಪಟ್ಟ ಕಂದಾಯ ನಿರೀಕ್ಷಕ ಪೃಥ್ವಿ ಹೆಸರಿನ ಅಧಿಕಾರಿ ಪ್ರತಿ ಸೆಂಟ್ಸ್ಗೆ 100 ರೂ. ನಂತೆ ಲಂಚದ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ . ಫೆಬ್ರವರಿ 4, 2026 ರಂದು ತಮ್ಮ ಕಚೇರಿಯಲ್ಲೇ 1000 ರೂ. ಲಂಚ ಸ್ವೀಕರಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಜನರ ಅಳೆದಾಟ: ಸಾರ್ವಜನಿಕರು ತಮ್ಮ ನ್ಯಾಯಬದ್ಧ ಕೆಲಸಗಳಿಗಾಗಿ ದಿನಗಟ್ಟಲೆ ಕಚೇರಿಗಳಿಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಣ್ಣ ಕೆಲಸಗಳಿಗೂ ಸಹಿ ಹಾಕಲು ಅಧಿಕಾರಿಗಳು ವಿಳಂಬ ನೀತಿ ಅನುಸರಿಸುವುದು, ಸಾರ್ವಜನಿಕರನ್ನು ಅಲೆದಾಡಿಸುವುದು ಮತ್ತು ಕೊನೆಯಲ್ಲಿ ಹಣದ ಬೇಡಿಕೆಯಿಡುವುದು ಸಾಮಾನ್ಯವಾಗಿದೆ. ಇಂತಹ ಭ್ರಷ್ಟ ಅಧಿಕಾರಿಗಳಿಂದಾಗಿ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಸಾಮಾನ್ಯ ಜನರ ಶ್ರಮ ವ್ಯರ್ಥವಾಗುತ್ತಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.



ಕಾನೂನು ವ್ಯಾಪ್ತಿ ಮತ್ತು ಶಿಕ್ಷೆ: ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷವು ಈ ಕುರಿತು ದೂರು ನೀಡಿದ್ದು, ಆರೋಪಿ ಅಧಿಕಾರಿಯ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ 1988 (Prevention of Corruption Act 1988) ರ ಸೆಕ್ಷನ್ (7) ರ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಈ ಕಾಯ್ದೆಯ ಪ್ರಕಾರ ಲಂಚ ಪಡೆಯುವುದು ಗಂಭೀರ ಅಪರಾಧವಾಗಿದ್ದು, ಕೇವಲ ಎಚ್ಚರಿಕೆ ನೀಡಿ ಬಿಡುವುದು ಸರಿಯಲ್ಲ, ಬದಲಾಗಿ ಕೂಡಲೇ ಸೇವೆಯಿಂದ ಅಮಾನತು (Suspend) ಮಾಡಬೇಕು ಎಂದು ಕಡಬ ತಾಲೂಕು ತಹಶೀಲ್ದಾರ್ ಪ್ರಭಾಕರ ಖಜೂರೆ ಅವರಿಗೆ ಅಧಿಕೃತ ಮನವಿ ಸಲ್ಲಿಸಿ ಒತ್ತಾಯಿಸಿದೆ.
“ಒಳ್ಳೆಯ ಆಡಳಿತ ಮತ್ತು ಪಾರದರ್ಶಕ ಸೇವೆ ನೀಡುವುದು ಅಧಿಕಾರಿಗಳ ಕರ್ತವ್ಯ. ಆದರೆ ಇಂತಹ ಅಧಿಕಾರಿಗಳು ಕೇವಲ ಹಣಕ್ಕಾಗಿ ಸಾರ್ವಜನಿಕರನ್ನು ಪೀಡಿಸುತ್ತಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ” ಎಂದು ಕೆಆರ್ಎಸ್ ಪಕ್ಷದ ಪ್ರಮುಖರು ತಿಳಿಸಿದ್ದಾರೆ.
ಈ ಪ್ರಕರಣವು ಇದೀಗ ಕಡಬ ತಾಲೂಕಿನಾದ್ಯಂತ ಸದ್ದು ಮಾಡುತ್ತಿದ್ದು, ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನಸಾಮಾನ್ಯರು ಒತ್ತಾಯಿಸುತ್ತಿದ್ದಾರೆ.
