ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿ |ರಸ್ತೆ ದುರಸ್ತಿಗಾಗಿ ‘ಭಿಕ್ಷಾಟನಾ ಅಭಿಯಾನ’ ಪೋಸ್ಟರ್ ವೈರಲ್, ಏನಿದು?

kadaba times

ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಡ್ಯಡ್ಕ -ಚಾಕೋಟ್ಟೆ ರಸ್ತೆ ದುರಸ್ತಿಗೆ ಅನುದಾನ ಇಲ್ಲ ಎಂದ ಪಂಚಾಯತ್ ಉತ್ತರದಿಂದ  ಆಕ್ರೋಶಗೊಂಡ ಗ್ರಾಮಸ್ಥರು  ಭಿಕ್ಷೆ ಬೇಡಿ ರಸ್ತೆ ಸರಿಪಡಿಸುವ ವಿಭಿನ್ನ ಪೋಸ್ಟರ್ ವೈರಲ್ ಗೊಳಿಸಿದ್ದು ಭಾರೀ ಸುದ್ದಿಯಲ್ಲಿದೆ.

kadaba times
uniq

ಕಡಬ: “ನಮ್ಮ ಹಳ್ಳಿಯ ಅಭಿವೃದ್ಧಿಗಾಗಿ ನಾವೇ ಕೈಜೋಡಿಸೋಣ. ಸರ್ಕಾರ ಬಾರದಿದ್ದರೇನಂತೆ, ನಮ್ಮ ಊರನ್ನು ನಾವೇ ಉಳಿಸಿಕೊಳ್ಳೋಣ” ಇದು ವ್ಯವಸ್ಥೆಯ ವಿರುದ್ಧ ಬೇಸತ್ತ ಕಡಬದ ಮಡ್ಯಡ್ಕ – ಬೋಳ್ಳೆಕುಕ್ಕು – ಚಾಕೋಟ್ಟೆ ಭಾಗದ ಗ್ರಾಮಸ್ಥರ ಒಕ್ಕೊರಲ ದನಿಯಾಗಿದೆ.  ದಶಕಗಳಿಂದ ರಸ್ತೆ ಕಾಣದ ಈ ಭಾಗದ ಜನರು ಈಗ ಅಧಿಕಾರಿಗಳ ಕಣ್ಣು ತೆರೆಸಲು ‘ಭಿಕ್ಷಾಟನಾ ಅಭಿಯಾನ’ ಎಂಬ ವಿಭಿನ್ನ ಹಾದಿ ಹಿಡಿದಿದ್ದಾರೆ.

ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಡ್ಯಡ್ಕದಿಂದ ಚಾಕೋಟ್ಟೆವರೆಗಿನ ರಸ್ತೆಯು ಸುಮಾರು 40 ವರ್ಷಗಳಿಂದ ಸರಿಯಾದ ಅಭಿವೃದ್ಧಿ ಕಂಡಿಲ್ಲ. ಪ್ರಸ್ತುತ ಈ ರಸ್ತೆಯು ಸಂಪೂರ್ಣವಾಗಿ ಹೊಂಡಗುಂಡಿಗಳಿಂದ ಕೂಡಿದ್ದು, ಕೆಸರುಮಯವಾಗಿದೆ. ಇದರಿಂದಾಗಿ ವಾಹನ ಸವಾರರು ಹಾಗೂ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ರಸ್ತೆಯ ಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ತುರ್ತು ಸಂದರ್ಭಗಳಲ್ಲಿ ಈ ಭಾಗಕ್ಕೆ ಅಟೋ ರಿಕ್ಷಾಗಳು ಬರಲು ಕೂಡ ಒಪ್ಪುತ್ತಿಲ್ಲ.

ಅಧಿಕಾರಿಗಳ ಭರವಸೆ ಬರೀ ಹುಸಿ?

ರಸ್ತೆ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಹಲವಾರು ಬಾರಿ ಮನವಿ ಸಲ್ಲಿಸಿದ್ದಾರೆ. ಈ ಹಿಂದೆ ಸಹಾಯಕ ಕಮಿಷನರ್ (AC) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪಟ್ಟಣ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ್ದರು. ಆಗ ಸ್ಥಳಕ್ಕೆ ಬಂದ ಅಧಿಕಾರಿಗಳು ‘ನಗರೋತ್ಥಾನ ಯೋಜನೆ’ಯಡಿ ಅನುದಾನ ಬಳಸಿ ರಸ್ತೆ ಸರಿಪಡಿಸುವ ಭರವಸೆ ನೀಡಿದ್ದರು. ಆದರೆ ಚುನಾವಣೆ ಮುಗಿದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ.

kadaba times
kadaba times

ಪಂಚಾಯತ್ ವಿರುದ್ಧ ‘ಭಿಕ್ಷಾಟನಾ’ ಅಸ್ತ್ರ

ರಸ್ತೆ ಅಭಿವೃದ್ಧಿ ಬಗ್ಗೆ ಪಂಚಾಯತ್ ಅಧಿಕಾರಿಗಳನ್ನು ಪ್ರಶ್ನಿಸಿದರೆ, “ಅನುದಾನದ ಕೊರತೆ ಇದೆ, ಹಣವಿಲ್ಲ” ಎಂಬ ಸಬೂಬು ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ನಿವಾಸಿಗಳು, ಸಾರ್ವಜನಿಕವಾಗಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ, ಆ ಹಣದಿಂದಲೇ ರಸ್ತೆ ದುರಸ್ತಿ ಮಾಡಲು ನಿರ್ಧರಿಸಿದ್ದಾರೆ. ಈ ಮೂಲಕ ಸರ್ಕಾರದ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯಲು ಗ್ರಾಮಸ್ಥರು ಮುಂದಾಗಿದ್ದಾರೆ.

ಮಹಿಳಾ ಸಂಘದ ಬೆಂಬಲ

ಸೌಭಾಗ್ಯ ಮಹಿಳಾ ಮಹಾಸಂಘದ ಸದಸ್ಯರು ಕೂಡ ಈ ಹೋರಾಟಕ್ಕೆ ಕೈಜೋಡಿಸಿದ್ದು, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ತಮನ್ನಾ ಜಬೀನ್ ಮತ್ತು ಮುಖ್ಯಾಧಿಕಾರಿಗಳಿಗೆ ರಸ್ತೆ ದುರಸ್ತಿಗೆ ಆಗ್ರಹಿಸಿ ಈಗಾಗಲೇ ಅಧಿಕೃತ ಮನವಿ ಸಲ್ಲಿಸಿದ್ದಾರೆ. ಶಾಲಾ ಮಕ್ಕಳು, ವೃದ್ಧರು ಮತ್ತು ರೋಗಿಗಳ ಹಿತದೃಷ್ಟಿಯಿಂದ ತಕ್ಷಣ ರಸ್ತೆ ಸರಿಪಡಿಸಬೇಕು ಎಂಬುದು ಇವರ ಆಗ್ರಹವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ‘ಭಿಕ್ಷಾಟನಾ ಅಭಿಯಾನ’ದ ಪೋಸ್ಟರ್‌ಗಳು ಭಾರಿ ವೈರಲ್ ಆಗುತ್ತಿದ್ದು, ಜನರ ಆಕ್ರೋಶಕ್ಕೆ ಮಣಿದು ಅಧಿಕಾರಿಗಳು ಯಾವಾಗ ರಸ್ತೆ ಸರಿಪಡಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Related Articles

Latest Articles