
ದೈವಗಳ ಮೂರ್ತಿ ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸರು, ಕುಖ್ಯಾತ ರೌಡಿಶೀಟರ್ ವಾಜೀದ್ ಹಾಗೂ ಕಳವು ಮಾಲು ಖರೀದಿಸಿದ ಸಯ್ಯದ್ ಆಲಿಯನ್ನು ಬಂಧಿಸಿದ್ದಾರೆ.


ಮಂಗಳೂರು: ಬೀಗ ಹಾಕಿದ್ದ ಮನೆಯ ಹಂಚು ತೆಗೆದು ದೈವಗಳ ಬೆಳ್ಳಿ-ತಾಮ್ರದ ಮೂರ್ತಿಗಳು ಹಾಗೂ ಪೂಜಾ ಪರಿಕರಗಳನ್ನು ಕಳವು ಮಾಡಿದ್ದ ಪ್ರಕರಣವನ್ನು ಸುರತ್ಕಲ್ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಕುಖ್ಯಾತ ರೌಡಿ ಶೀಟರ್ ಹಾಗೂ ಕಳವು ಮಾಲು ಖರೀದಿಸಿದ್ದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಏನಿದು ಪ್ರಕರಣ? ;ಕುಳಾಯಿ ಗ್ರಾಮದ ನಿವಾಸಿ ಶ್ರೀಮತಿ ಅಮಿತಾ ಎಂಬುವವರ ತಾಯಿ ಮನೆಯಲ್ಲಿ ದೈವಗಳ ಮೂರ್ತಿಗಳಿದ್ದು, ನಿತ್ಯ ಪೂಜೆ ನಡೆಸಿ ಬೀಗ ಹಾಕಲಾಗುತ್ತಿತ್ತು. ಆದರೆ ಡಿಸೆಂಬರ್ 26, 2025ರ ರಾತ್ರಿ ಕಳ್ಳರು ಮನೆಯ ಮೇಲ್ಚಾವಣಿಯ ಹಂಚು ತೆಗೆದು ಒಳನುಗ್ಗಿ, ಬೆಳ್ಳಿಯ ಮಂತ್ರದೇವತೆ ಮೂರ್ತಿ, ತಾಮ್ರದ ಪಸಪ್ಪ ದೈವದ ಮೂರ್ತಿ, ಕಲ್ಲುರ್ಟಿ-ಪಂಜುರ್ಲಿ ದೈವದ ಮೂರ್ತಿಗಳು ಸೇರಿದಂತೆ ಪೂಜಾ ಪರಿಕರಗಳು ಹಾಗೂ ಎಲ್.ಇ.ಡಿ ಟಿವಿಯನ್ನು ಕಳವು ಮಾಡಿದ್ದರು. ಈ ಕುರಿತು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪೊಲೀಸ್ ಕಾರ್ಯಾಚರಣೆ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸುರತ್ಕಲ್ ಪೊಲೀಸರು ತಾಂತ್ರಿಕ ವಿಧಾನ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಆರೋಪಿ ವಾಜೀದ್ ಜೆ @ ವಾಜಿ (27) ಎಂಬಾತನನ್ನು ಬಂಧಿಸಿದರು. ಬಂಧಿತ ವಾಜೀದ್ ವಿಚಾರಣೆ ವೇಳೆ ತಾನು ಕದ್ದ ಮಾಲನ್ನು ಜೋಕಟ್ಟೆಯ ಸಯ್ಯದ್ ಆಲಿ (40) ಎಂಬಾತನಿಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದರ ಆಧಾರದ ಮೇಲೆ ಸಯ್ಯದ್ ಆಲಿಯನ್ನು ಬಂಧಿಸಿದ ಪೊಲೀಸರು ಕಳವು ಮಾಡಲಾದ ಮಾಲನ್ನು ವಶಕ್ಕೆ ಪಡೆದಿದ್ದಾರೆ.


ವಶಪಡಿಸಿಕೊಂಡ ಸ್ವತ್ತುಗಳು: ಆರೋಪಿಗಳಿಂದ ಒಟ್ಟು 2,30,100 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.ಬೆಳ್ಳಿಯ ಮಂತ್ರದೇವತೆ ಮೂರ್ತಿ, ಕೊಡೆ, ಕಡ್ಸಲೆ (ಮೌಲ್ಯ ₹1.95 ಲಕ್ಷ),ಹಿತ್ತಾಳೆ ಹಾಗೂ ತಾಮ್ರದ ಪೂಜಾ ಸಾಮಾಗ್ರಿಗಳು,ಟಿ.ವಿ ಮತ್ತು ಸೆಟ್ ಆಪ್ ಬಾಕ್ಸ್,ಕಾವೂರು ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಒಂದು ಸ್ಕೂಟರ್ ಹಾಗೂ 2 ಮೊಬೈಲ್ಗಳು.
ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿಶೀಟರ್: ಬಂಧಿತ ಪ್ರಮುಖ ಆರೋಪಿ ವಾಜೀದ್ ಕುಖ್ಯಾತ ಅಪರಾಧಿಯಾಗಿದ್ದು, ಈತನ ಮೇಲೆ ಸುರತ್ಕಲ್ ಠಾಣೆಯಲ್ಲಿ ‘ಬಿ’ ರೌಡಿ ಶೀಟ್ ತೆರೆಯಲಾಗಿದೆ. ಈತನ ವಿರುದ್ಧ ಮಂಗಳೂರು ನಗರ, ಉಡುಪಿ, ಉತ್ತರ ಕನ್ನಡ ಹಾಗೂ ಹಾಸನ ಜಿಲ್ಲೆಗಳಲ್ಲಿ ಕೊಲೆಯತ್ನ, ದರೋಡೆ, ದನ ಕಳ್ಳತನ, ಮನೆಕಳ್ಳತನ ಸೇರಿದಂತೆ ಒಟ್ಟು 16 ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ದಸ್ತಗಿರಿ ವಾರಂಟ್ ಕೂಡ ಇತ್ತು.ಬಂಧಿತ ಆರೋಪಿಗಳನ್ನು ಜನವರಿ 28ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
