
ಬೆಂಗಳೂರಿನ ಸಂಗೀತಾ ಮೊಬೈಲ್ ಹೆಸರಿನಲ್ಲಿ ಕರೆ ಮಾಡಿ ಕೇವಲ 1900 ರೂಪಾಯಿಗೆ ಸ್ಮಾರ್ಟ್ಫೋನ್ ನೀಡುವುದಾಗಿ ನಂಬಿಸಿ ಕಡಬದ ಯುವಕನಿಗೆ ವಂಚಿಸಲಾಗಿದೆ. ಈ ಸೈಬರ್ ದಂಧೆಯ ಕರಾಳ ಮುಖ ಮತ್ತು ಜನ ಸಾಮಾನ್ಯರು ಎಚ್ಚರದಿಂದಿರಬೇಕಾದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.


ಕಡಬ: “ಕೇವಲ 1,900 ರೂಪಾಯಿಗೆ ಸ್ಮಾರ್ಟ್ಫೋನ್, ಬ್ಲೂಟೂತ್ ಮತ್ತು ಪವರ್ ಬ್ಯಾಂಕ್ ನೀಡಲಾಗುವುದು” ಎಂಬ ಆಕರ್ಷಕ ಆಮಿಷಕ್ಕೆ ಬಲಿಯಾದ ಬೆಳ್ಳಂದೂರು ಗ್ರಾಮದ ಗಿರೀಶ್ ಎಂಬುವವರು ಆನ್ಲೈನ್ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ವಿವರ: ಬೆಂಗಳೂರಿನ ‘ಸಂಗೀತಾ ಮೊಬೈಲ್’ ಮಳಿಗೆಯಿಂದ ಮಾತನಾಡುತ್ತಿರುವುದಾಗಿ ನಂಬಿಸಿದ ‘ಸ್ವಾತಿ’ ಎಂಬ ಹೆಸರಿನ ಮಹಿಳೆಯೊಬ್ಬಳು, ಹೊಸ ವರ್ಷದ ವಿಶೇಷ ಕೊಡುಗೆಯಾಗಿ ರೆಡ್ಮಿ ಮೊಬೈಲ್ ಸೇರಿದಂತೆ ಮೂರು ವಸ್ತುಗಳನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುವುದಾಗಿ ಗಿರೀಶ್ ಅವರಿಗೆ ಕರೆ ಮಾಡಿದ್ದಾಳೆ (7625004793). ಇದನ್ನು ನಂಬಿದ ಗಿರೀಶ್ ತಮ್ಮ ವಿಳಾಸ ನೀಡಿ ಪಾರ್ಸೆಲ್ ಬುಕ್ ಮಾಡಿದ್ದರು.
ಪಾರ್ಸೆಲ್ನಲ್ಲಿತ್ತು ಅಚ್ಚರಿ: ಕೆಲ ದಿನಗಳ ನಂತರ ಮನೆಗೆ ಬಂದ ಪೋಸ್ಟ್ ಪಾರ್ಸೆಲ್ ಪಡೆಯಲು ಗಿರೀಶ್ 1,900 ರೂಪಾಯಿ ಪಾವತಿಸಿದ್ದಾರೆ. ಆದರೆ ಪಾರ್ಸೆಲ್ ಬಿಚ್ಚಿ ನೋಡಿದಾಗ ಒಳಗಡೆ ಮೊಬೈಲ್ ಆಗಲಿ, ಪವರ್ ಬ್ಯಾಂಕ್ ಆಗಲಿ ಇರಲಿಲ್ಲ. ಅದರ ಬದಲಿಗೆ ಕೇವಲ 200 ರೂಪಾಯಿ ಬೆಲೆಬಾಳುವ ಒಂದು ಸಣ್ಣ ಸ್ಪೀಕರ್ ಮಾತ್ರ ಇತ್ತು. ಮೋಸ ಹೋದ ವಿಷಯ ತಿಳಿದು ತಕ್ಷಣ ಅದೇ ನಂಬರ್ ಗೆ ಕರೆ ಮಾಡಿದರೆ, ವಂಚಕಿ ಸರಿಯಾದ ಪ್ರತಿಕ್ರಿಯೆ ನೀಡದೆ ಈಗ ಕರೆ ಸ್ವೀಕರಿಸುತ್ತಿಲ್ಲ.


ಹೆಸರು ದುರ್ಬಳಕೆ: ಪುತ್ತೂರಿನ ಅಸಲಿ ಸಂಗೀತಾ ಮೊಬೈಲ್ ಶೋರೂಂನಲ್ಲಿ ವಿಚಾರಿಸಿದಾಗ, ತಮಗೂ ಈ ಕರೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ಕೋರಮಂಗಲದಿಂದ ಪೋಸ್ಟ್ ಆಗಿರುವ ಈ ಪಾರ್ಸೆಲ್ನಲ್ಲಿ ಕಳುಹಿಸಿದವರ ಸರಿಯಾದ ವಿಳಾಸವೂ ಇಲ್ಲದೆ ಇರುವುದು ವಂಚನೆಯ ಜಾಲ ಎಷ್ಟು ವ್ಯವಸ್ಥಿತವಾಗಿದೆ ಎಂಬುದನ್ನು ತೋರಿಸುತ್ತದೆ.
ಸಾರ್ವಜನಿಕರಿಗೆ ಎಚ್ಚರಿಕೆ: ಇಂತಹ ವಂಚಕರಿಗೆ ಪಾಠ ಕಲಿಸಲು ಸಾರ್ವಜನಿಕರು ಒಂದು ಉಪಾಯ ಮಾಡಬಹುದು. ಇಂತಹ ನಕಲಿ ಆಫರ್ ಕರೆಗಳು ಬಂದಾಗ ವಸ್ತುಗಳನ್ನು ಬುಕ್ ಮಾಡಿ, ಪಾರ್ಸೆಲ್ ಬಂದಾಗ ಹಣ ನೀಡದೆ ಅದನ್ನು ವಾಪಸ್ ಕಳುಹಿಸಬೇಕು. ಇದರಿಂದ ವಂಚಕರಿಗೆ ಸಾರಿಗೆ ವೆಚ್ಚದ ನಷ್ಟವಾಗಿ ಅವರೇ ಹೈರಾಣಾಗುತ್ತಾರೆ. ಅಪರಿಚಿತ ಕರೆಗಳ ಮೂಲಕ ಬರುವ ಇಂತಹ “ಬಂಪರ್ ಆಫರ್”ಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಈ ಮೂಲಕ ವಿನಂತಿಸಲಾಗಿದೆ.
