ಕಡಬ: ‘ಪೊಲೀಸ್ ಕಂಪ್ಲೇಂಟ್ ಕೊಟ್ಟು ಹೇಗೆ ಬದುಕುತ್ತೀಯಾ?’; ವ್ಯಕ್ತಿ ಮೇಲೆ ಹಲ್ಲೆ ನಡೆಸಿ ನಾಪತ್ತೆಯಾದ ಕೈ ಕಾರ್ಯಕರ್ತ

kadaba times

ಕಡಬ: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಮರ್ದಾಳ ಗ್ರಾಮ ಪಂಚಾಯತ್ ಸದಸ್ಯರೊಬ್ಬರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadaba times
uniq

ಘಟನೆಯ ವಿವರ: ಪಾಲ್ತಾಡು ಗ್ರಾಮದ ನಿವಾಸಿ ಜಗದೀಶ್ (28) ಎಂಬವರು ನೀಡಿದ ದೂರಿನನ್ವಯ, ಜನವರಿ 16ರಂದು ರಾತ್ರಿ ಕಡಬದ ಕಳಾರದಲ್ಲಿರುವ ಸುರಭಿ ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಜಗದೀಶ್ ಅವರು ಊಟ ಮುಗಿಸಿ ಕ್ಯಾಶ್ ಕೌಂಟರ್ ಬಳಿ ನಿಂತಿದ್ದಾಗ ಅಲ್ಲಿಗೆ ಬಂದ ಅಜಯ ಎಂಬುವವರು ವಿನಾಕಾರಣ ಜಗಳ ತೆಗೆದು, ಜಗದೀಶ್ ಅವರ ಕೆನ್ನೆ, ತಲೆ ಹಾಗೂ ಬೆನ್ನಿನ ಭಾಗಕ್ಕೆ ಕೈಯಿಂದ ಹೊಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೂರಿನಲ್ಲಿರುವ ಪ್ರಮುಖ ಅಂಶಗಳು: ಹಲ್ಲೆ ನಡೆಸಿದ ವೇಳೆ ಅಡ್ಡ ಬಂದ ರವಿ ಪಂಜ ಎಂಬವರಿಗೂ ಆರೋಪಿಗಳು ತಳ್ಳಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. “ಪೊಲೀಸ್ ದೂರು ನೀಡಿದರೆ ಬದುಕಲು ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿದ್ದಲ್ಲದೆ, ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಸಂತ್ರಸ್ತರು ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕೃತ್ಯದಲ್ಲಿ ಅಜಯ ಅವರಿಗೆ ಬೇಬಿ ಮತ್ತು ಅನಿಲ್ ಎಂಬವರು ಸಾಥ್ ನೀಡಿದ್ದಾರೆ ಎಂದು ದೂರಿನಲ್ಲಿ ಹೆಸರಿಸಲಾಗಿದೆ.

kadaba times
kadaba times

ಪೊಲೀಸ್ ತನಿಖೆ: ಜಗದೀಶ್ ನೀಡಿದ ದೂರನ್ನು ದಾಖಲಿಸಿಕೊಂಡಿರುವ ಕಡಬ ಪೊಲೀಸರು, ಅಜಯ ಹಾಗೂ ಇತರರ ವಿರುದ್ಧ ಬಿಎನ್ಎಸ್ (BNS) ಕಾಯ್ದೆಯ ವಿವಿಧ ಸೆಕ್ಷನ್‌ಗಳು ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್ (ಅ.ಕ್ರ: 08/2026) ದಾಖಲಿಸಿಕೊಂಡಿದ್ದಾರೆ.ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಅವರ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪಕ್ಷದಿಂದ ಶಿಸ್ತು ಕ್ರಮಕ್ಕೆ ಆಗ್ರಹ:   ಸಾರ್ವಜನಿಕ ಸ್ಥಳದಲ್ಲಿ ಪುಂಡಾಟಿಕೆ ನಡೆಸಿ, ವ್ಯಕ್ತಿಯ ಮೇಲೆ ಹಲ್ಲೆ ಹಾಗೂ ಜಾತಿ ನಿಂದನೆ ಮಾಡಿದ ಆರೋಪ ಎದುರಿಸುತ್ತಿರುವ ಮರ್ದಾಳ ಗ್ರಾ.ಪಂ ಸದಸ್ಯನ   ವಿರುದ್ಧ ಕಡಬ ಕಾಂಗ್ರೆಸ್‌ನ ಪ್ರಮುಖರು ಹಾಗೂ ಹಿರಿಯ ಮುಖಂಡರು ಶಿಸ್ತು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಯೇ ಇಂತಹ ಕೃತ್ಯದಲ್ಲಿ ತೊಡಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಘಟನೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗಿದ್ದು, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಕಾರ್ಯಕರ್ತನ ವಿರುದ್ಧ ಪಕ್ಷದ ಹೈಕಮಾಂಡ್ ಹಾಗೂ ಸ್ಥಳೀಯ ಮುಖಂಡರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Related Articles

Latest Articles