
ನೆಲ್ಯಾಡಿ: ಇಲ್ಲಿಗೆ ಸಮೀಪದ ಬರೆಗುಡ್ಡೆ ತಿರುವಿನಲ್ಲಿ ಭಾನುವಾರ (ಜ.11) ಬೆಳಿಗ್ಗೆ ಕಾರೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


*
ನೆಲ್ಯಾಡಿಯಿಂದ ಬಲ್ಯ ಕಡೆಗೆ ಉಮೇಶ್ ಎಂಬವರು ತಮ್ಮ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದರು. ಬರೆಗುಡ್ಡೆ ತಿರುವಿನ ಸಮೀಪ ತಲುಪಿದಾಗ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಿದ್ದ 11 ಕೆವಿ ವಿದ್ಯುತ್ ತಂತಿಯಿದ್ದ ಕಂಬಕ್ಕೆ ಬಲವಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಗೆ ವಿದ್ಯುತ್ ಕಂಬವು ಸಂಪೂರ್ಣವಾಗಿ ತುಂಡಾಗಿ ನೆಲಕ್ಕುರುಳಿದೆ.
11 ಕೆವಿ ಲೈನ್ ಕಂಬ ಮುರಿದು ಬಿದ್ದ ಪರಿಣಾಮ ಸುತ್ತಮುತ್ತಲಿನ ಪರಿಸರದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಸ್ಥಳೀಯ ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಕಾರು ಜಖಂಗೊಂಡಿದ್ದರೂ, ಚಾಲಕ ಉಮೇಶ್ ಅವರು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ .
ರಸ್ತೆಯ ತಿರುವುಗಳಲ್ಲಿ ಚಾಲನೆ ಮಾಡುವಾಗ ವೇಗದ ಮಿತಿ ಇರಲಿ. ಅದರಲ್ಲೂ ವಿದ್ಯುತ್ ಕಂಬಗಳು ರಸ್ತೆ ಬದಿಯಲ್ಲಿರುವಾಗ ಅತಿ ವೇಗವು ಪ್ರಾಣಾಪಾಯಕ್ಕೆ ಅಥವಾ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡಬಹುದು. ತಿರುವುಗಳಲ್ಲಿ ಜಾಗರೂಕತೆಯಿಂದ ಚಾಲನೆ ಮಾಡುವುದು ನಿಮ್ಮ ಮತ್ತು ಇತರರ ಸುರಕ್ಷತೆಗೆ ಅಗತ್ಯ.


