ಕಡಬ: ಎಡಮಂಗಲದಲ್ಲಿ ಚಿರತೆ ಅಟ್ಟಹಾಸ: ಮನೆಯಂಗಳದಲ್ಲಿದ್ದ ನಾಯಿಯನ್ನು ಹೊತ್ತೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

kadaba times

ಕಡಬ: ಪಂಜ ಮೀಸಲು ಅರಣ್ಯ ವ್ಯಾಪ್ತಿಗೆ ಒಳಪಟ್ಟ ಎಡಮಂಗಲ ಗ್ರಾಮದಲ್ಲಿ ಚಿರತೆ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

kadaba times
uniq

ಜ.7 ರಂದು ಎಡಮಂಗಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಸುಮ ನೂಜಿಲ ಅವರ ಮನೆಯಂಗಳಕ್ಕೆ ನುಗ್ಗಿದ ಬೃಹತ್ ಗಾತ್ರದ ಚಿರತೆಯೊಂದು ಸಾಕು ನಾಯಿಯನ್ನು ಬೇಟೆಯಾಡಿ ಹೊತ್ತೊಯ್ದಿದೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು: ಜ.7 ರಂದು ಸುಮ ನೂಜಿಲ ಅವರ ಕುಟುಂಬದವರು ಕಾರ್ಯಕ್ರಮವೊಂದಕ್ಕೆ ತೆರಳಿದ್ದರಿಂದ ಮನೆಗೆ ಬೀಗ ಹಾಕಲಾಗಿತ್ತು.  ಸಾಯಂಕಾಲ ಸುಮಾರು 7 ಗಂಟೆಯ ಹೊತ್ತಿಗೆ ಮನೆಯಂಗಳಕ್ಕೆ ಲಗ್ಗೆ ಇಟ್ಟಿದೆ. ಸುಮಾರು ಒಂದು ಗಂಟೆಗಳ ಕಾಲ ಮನೆಯ ಸುತ್ತಮುತ್ತಲೇ ಹೊಂಚು ಹಾಕಿದ ಚಿರತೆ, ಅಂತಿಮವಾಗಿ ಸಾಕು ನಾಯಿಯನ್ನು  ಕಚ್ಚಿಕೊಂಡು ಪರಾರಿಯಾಗಿದೆ. ಈ  ದೃಶ್ಯಗಳು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಸರಣಿ ನಾಯಿಗಳ ನಾಪತ್ತೆ :ಕಳೆದ ಕೆಲ ದಿನಗಳಿಂದ ಈ ಪರಿಸರದಲ್ಲಿ ಸುಮಾರು ನಾಲ್ಕು ಮನೆಗಳ ಸಾಕು ನಾಯಿಗಳು ನಿಗೂಢವಾಗಿ ನಾಪತ್ತೆಯಾಗಿದ್ದವು. ಆದರೆ ಆ ಮನೆಗಳಲ್ಲಿ ಸಿಸಿಟಿವಿ ಇಲ್ಲದ ಕಾರಣ ಚಿರತೆಯ ಬಗ್ಗೆ ಯಾರಿಗೂ ಸುಳಿವು ಇರಲಿಲ್ಲ. ಇದೀಗ ಸುಮ ನೂಜಿಲ ಅವರ ಮನೆಯ ದೃಶ್ಯಾವಳಿಗಳಿಂದಾಗಿ, ಈ ಭಾಗದಲ್ಲಿ ಚಿರತೆ ಬೀಡು ಬಿಟ್ಟಿರುವುದು ಖಚಿತವಾಗಿದ್ದು, ಈ ಹಿಂದಿನ ನಾಯಿಗಳ ನಾಪತ್ತೆಗೂ ಇದೇ ಚಿರತೆ ಕಾರಣವೆಂಬ ಸಂಶಯ ದಟ್ಟವಾಗಿದೆ.

kadaba times
kadaba times

ಸ್ಥಗಿತಗೊಂಡ ಕೃಷಿ ಚಟುವಟಿಕೆ; ಕಂಗಾಲಾದ ಗ್ರಾಮಸ್ಥರು: ಚಿರತೆ ದಾಳಿಯ ಭೀತಿಯಿಂದಾಗಿ ಗ್ರಾಮಸ್ಥರು ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ರಬ್ಬರ್ ಟ್ಯಾಪಿಂಗ್ ಮಾಡಲು ಕಾರ್ಮಿಕರು ತೆರಳುತ್ತಿಲ್ಲ, ಇದು ಕೃಷಿಕರಿಗೆ ಆರ್ಥಿಕ ನಷ್ಟವನ್ನೂ ತಂದೊಡ್ಡುತ್ತಿದೆ. ಶಾಲಾ ಮಕ್ಕಳು ಮತ್ತು ಕಾರ್ಮಿಕರು ದಿನನಿತ್ಯ ಕಾಡು ಹಾದಿಯಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಇರುವುದರಿಂದ, ಅನಾಹುತ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸುಮಾರು ಎರಡು ವಾರಗಳ ಹಿಂದೆ ಪಾಲೋಳಿ ಸೇತುವೆ ವ್ಯಾಪ್ತಿಯಲ್ಲಿ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿತ್ತು. ಆದರೆ ಅವರ ಭೇಟಿಯ ಉದ್ದೇಶವೇನು ಎಂಬುದು ಯಾರಿಗೂ ತಿಳಿದಿಲ್ಲ. ಅರಣ್ಯ ಇಲಾಖೆ ಕೇವಲ ಭೇಟಿ ನೀಡುವುದಲ್ಲದೆ, ತಕ್ಷಣ ಬೋನು ಇಟ್ಟು ಈ ಚಿರತೆಯನ್ನು ಸೆರೆಹಿಡಿಯಬೇಕು,” ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Related Articles

Latest Articles