
ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಯೋಗ ಕ್ಷೇಮ ಸಹಕಾರ ಭವನದಲ್ಲಿ ಪ್ರಾರಂಭಿಸಿರುವ ನೂತನ ಮಣ್ಣು ಪರೀಕ್ಷಾ ಕೇಂದ್ರ ಭೂ ಸತ್ವವನ್ನು ದ.ಕ.ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನ.24ರಂದು ಉದ್ಘಾಟಿಸಿದರು.


ಈ ವೇಳೆ ಮಾತನಾಡಿದ ಅವರು ಹೆಚ್ಚಿನ ಇಳುವರಿಯ ಆಸೆಯಿಂದ ರಾಸಾಯನಿಕ ಗೊಬ್ಬರದ ಮಿತಿಮೀರಿದ ಬಳಕೆಯಿಂದಾಗಿ ಭೂಮಿ ತನ್ನ ಸತ್ವವನ್ನು ಕಳೆದುಕೊಂಡು ಬರಡಾಗಿರುವುದು ಕೃಷಿಕರಿಗೆ ಅಪಾಯದ ಕರೆಗಂಟೆಯಾಗಿದೆ. ಆದುದರಿಂದ ಕೃಷಿಯಲ್ಲಿ ಮಣ್ಣು ಪರೀಕ್ಷೆ ನಡೆಸಿ ಅಗತ್ಯಕ್ಕನುಗುಣವಾಗಿ ಗೊಬ್ಬರ ಉಣಿಸುವುದು ಸೇರಿದಂತೆ ಆಧುನಿಕ ವೃಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ, ನಮ್ಮ ಜಿಲ್ಲೆಯ ಅಡಿಕೆ, ತೆಂಗು ಬೆಳೆಗಾರರು ತೋಟಗಳಿಗೆ ಬಂದಿರುವ ರೋಗ ಬಾಧೆಗಳಿಂದ ಕಂಗೆಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಸರಕಾರ ರೈತರಿಗೆ ನೆರವಾಗಿ ನಿಲ್ಲಬೇಕು ಎಂದರು.


ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಗೊಟ್ಟು , ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಪುತ್ತೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ರಘು ಎಸ್.ಎಂ., ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಟಿ.ಜೆ. ರಮೇಶ್, ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನದ ವಿಭಾಗದ ವಿಜ್ಞಾನಿ ಡಾ. ಮಲ್ಲಿಕಾರ್ಜುನ ಎಲ್. ಶುಭ ಹಾರೈಸಿದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣ ಜಿ., ನಿರ್ದೇಶಕರಾದ ರಘುಚಂದ್ರ ಕೊಣಾಜೆ, ಸದಾನಂದ ಪಿ.. ತಮ್ಮಯ್ಯ ಗೌಡ ಎಸ್., ಪುರುಷೋತ್ತಮ ಕಲ್ಲಂತಡ್ಕ, ಸತೀಶ್ಚಂದ್ರ ರೈ ಮೈಕಾಜೆ, ತನಿಯಪ್ಪ ಮಜ್ಜಗುಡ್ಡೆ, ಲತಾ ರೈ ಆರ್ತಿಲ, ವಸಂತಿ, ಪ್ರದೀಪ್ ಕೆ. (ಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕ) ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಮೇಶ್ ಕಲ್ಲುರೆ ವಹಿಸಿದ್ದರು.
