
ಕಡಬ: ಠಾಣೆ ಸಮೀಪದ ಖಾಸಗಿ ಕ್ಲಿನಿಕ್ನಲ್ಲಿ ಹಿರಿಯ ಮಹಿಳೆಗೆ ಹಾಳಾದ ಸ್ಥಿತಿಯಲ್ಲಿದ್ದ ಮಾತ್ರೆ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.


ಮರ್ದಾಳ ಸಮೀಪದ ಪಂಜೋಡಿಯ ಹಿರಿಯ ಮಹಿಳೆ ಅನಾರೋಗ್ಯದ ಹಿನ್ನೆಲೆಯಲ್ಲಿ ಕ್ಲಿನಿಕ್ಗೆ ನ.15 ರಂದು ಭೇಟಿ ನೀಡಿ ವಿಸಿಟಿಂಗ್ ವೈದ್ಯರ ಬಳಿ ಹೋಗಿದ್ದರು. ಅವರಿಗೆ PRIMCAL-K27 ಲೇಬಲ್ ಹೊಂದಿರುವ ಕ್ಯಾಪ್ಸ್ಯೂಲ್ ನೀಡಲಾಗಿದೆ. ಮನೆಗೆ ಬಂದ ನಂತರ ಮಹಿಳೆ ಮೂರು ಮಾತ್ರೆ ಸೇವಿಸಿದ ಮೇಲೆ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ .
ಸಾಮಾನ್ಯ ಬಣ್ಣಕ್ಕಿಂತ ಭಿನ್ನವಾಗಿ ಕರಗಿದ ಕಪ್ಪು–ಬ್ರೌನ್ ಬಣ್ಣದಲ್ಲಿ ಹಾಳಾದ ರೂಪದಲ್ಲಿ ಮಾತ್ರೆ ಇದ್ದ ಕಾರಣ ಮಹಿಳೆಯ ಪತಿ ಮಾತ್ರೆ ಕವರ್ ಸಹಿತ ಸಂಬಂಧಿಕರ ಬಳಿ ಕೊಂಡು ಹೋಗಿ ಚರ್ಚಿಸಿದ್ದಾರೆ. ಬಳಿಕ ಕ್ಲಿನಿಕ್ ಮುಖ್ಯಸ್ಥರನ್ನು ಸಂಪರ್ಕಿಸಿ ಮಾತ್ರೆ ಸ್ಥಿತಿ ಬಗ್ಗೆ ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ. ವಾರ ಕಳೆದರೂ ಪರ್ಯಾಯ ಮಾತ್ರೆಯನ್ನು ನೀಡಿಲ್ಲ ಎಂದು ಆರೋಪಿಸಲಾಗಿದೆ.
ವೈದ್ಯರೇ ತಂದು ಕೊಡುವ ಔಷಧವಾಗಿರುವುದರಿಂದ ಮಾತ್ರೆಯ ಸ್ಥಿತಿಯ ಬಗ್ಗೆ ನಮಗೆ ಗಮನಕ್ಕೆ ಬರಲಿಲ್ಲ, ಮಾತ್ರೆಯ ಲೇಬಲ್ ನಲ್ಲಿ ಅಂತಿಮ ದಿನಾಂಕ ಇನ್ನೂ ಇದೆ, ಮುಂದಿನ ದಿನಗಳಲ್ಲಿ ಇಂತಹ ತಪ್ಪು ಮರುಕಳಿಸದಂತೆ ಎಚ್ಚರವಹಿಸುವುದಾಗಿ ಮಹಿಳೆ ಸಂಬಂಧಿಕರಿಗೆ ಕ್ಲಿನಿಕ್ ಮುಖ್ಯಸ್ಥರು ಸಮಜಾಯಿಷಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.


ಈ ವಿಚಾರ ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿದ್ದು ಖಾಸಗಿ ಕ್ಲಿನಿಕ್ನಲ್ಲಿ ಇಂತಹ ಬೇಜವಾಬ್ದಾರಿಯ ನಡೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಇನ್ನು ಈ ರೀತಿ ಬರುವ ವೈಧ್ಯರಿಗೆ ಮಾತ್ರೆಗಳನ್ನು ತಂದು ಮಾರುವ ಅಥವಾ ಕೊಡುವುದನ್ನು ಅನುಮತಿಸಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ರೋಗಿಗಳು ನಂಬಿಕೆ ಇಟ್ಟು ಚಿಕಿತ್ಸೆ ಪಡೆದುಕೊಳ್ಳುವ ಸ್ಥಳದಲ್ಲೇ ಇಂತಹ ಎಡವಟ್ಟು ಆದರೆ ಹೊಣೆ ಯಾರು?” ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದ ಮೂಲಕ ವ್ಯಕ್ತವಾಗಿದೆ.
ಈ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಡಾ| ತಿಮ್ಮಯ್ಯ ಅವರು ಕಡಬ ಟೈಮ್ಸ್ ಗೆ ಪ್ರತಿಕ್ರಿಯೆ ನೀಡಿ, ಕ್ಲಿನಿಕ್ನಲ್ಲಿ ಹಾಳಾದ ಮಾತ್ರೆ ನೀಡಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.
