
KADABA TIMES: ಅನಾರೋಗ್ಯದಿಂದ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ ತನ್ನ ಸಹಪಾಠಿಯನ್ನು ನೋಡಲು ತೆರಳಿದ್ದ ವಿದ್ಯಾರ್ಥಿಗಳ ಗುಂಪಿನ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿ ಹಲ್ಲೆ ಮಾಡಿರುವ ಘಟನೆ ಗುರುವಾರ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಉಪ್ಪಿನಂಗಡಿಯ ಕಾಲೇಜೊಂದರಲ್ಲಿ ಕಲಿಯುತ್ತಿರುವ ಪೆರಿಯಡ್ಕ ಮೂಲದ ವಿದ್ಯಾರ್ಥಿಯೊಬ್ಬರು ಇತ್ತೀಚೆಗೆ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾಗ ಕಾಲಿಗೆ ಪೆಟ್ಟಾಗಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ನವೆಂಬರ್ 6ರಂದು ಮಧ್ಯಾಹ್ನ, ಆತನ ಆರೋಗ್ಯ ವಿಚಾರಿಸಲು 10 ಮಂದಿ ಸಹಪಾಠಿಗಳು ಆತನ ಮನೆಗೆ ತೆರಳಿದ್ದರು. ಈ ಗುಂಪಿನಲ್ಲಿ ಇಬ್ಬರು ಹಿಂದೂ ಸಮುದಾಯದ ವಿದ್ಯಾರ್ಥಿಗಳಿದ್ದರೆ, ನಾಲ್ವರು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಮತ್ತು ನಾಲ್ವರು ಮುಸ್ಲಿಂ ವಿದ್ಯಾರ್ಥಿನಿಯರು ಸೇರಿದ್ದರು.
ವಿದ್ಯಾರ್ಥಿಗಳು ಸ್ನೇಹಿತನ ಮನೆಯಿಂದ ವಾಪಸ್ ಬರುತ್ತಿದ್ದಾಗ, ಯುವಕರ ಗುಂಪೊಂದು ಅವರನ್ನು ಅಡ್ಡಗಟ್ಟಿ ಆಕ್ಷೇಪ ವ್ಯಕ್ತಪಡಿಸಿದೆ. ಈ ಪ್ರದೇಶದಲ್ಲಿ ಬುರ್ಖಾಧಾರಿ ವಿದ್ಯಾರ್ಥಿನಿಯರೊಂದಿಗೆ ವಿದ್ಯಾರ್ಥಿಗಳು ಸುತ್ತಾಡುತ್ತಿರುವುದನ್ನು ಪ್ರಶ್ನಿಸಿ, ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.


ಕಾನೂನು ಕೈಗೆತ್ತಿಕೊಂಡು ನೈತಿಕ ಪೊಲೀಸ್ ಗಿರಿ ನಡೆಸಿದ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾದರು. ಹಲ್ಲೆ ನಡೆಸಿದ ತಂಡದ ನೇತೃತ್ವ ವಹಿಸಿದ್ದ ಪೆರಿಯಡ್ಕ ನಿವಾಸಿಗಳಾದ ಮಹಮ್ಮದ್ ಮುಸ್ತಾಫ (40) ಮತ್ತು ಮುಸ್ತಾಫ (31) ಎಂಬವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ
ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 107/2025, ಕಲಂ: 126(2), 352, 351(2), 115(2), 353(2) ಬಿಎನ್ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿತರನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
