
ಕಡಬ ಟೈಮ್, ಗ್ರಾಮ ಸುದ್ದಿ: ಅಲೆಕ್ಕಾಡಿಯಿಂದ ಎಡಮಂಗಲಕ್ಕೆ ಹೋಗುವ 5 ಕಿ.ಮೀ. ಲೋಕೋಪಯೋಗಿ ರಸ್ತೆ ತೀರಾ ಹದಗೆಟ್ಟಿದ್ದು ಎಡಮಂಗಲ ರೈಲ್ವೆ ಗೇಟಿನ ತನಕ ಸಂಚಾರ ದುಸ್ತರವಾಗಿದೆ.


ಈ ರಸ್ತೆಯಲ್ಲಿ ವಾಹನ ಮಾತ್ರವಲ್ಲ, ಜನರೂ ಕೂಡ ನಡೆದಾಡಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಉಂಟಾಗಿದೆ. ಅಗತ್ಯ ಸಂದರ್ಭದಲ್ಲಿ ರೈಲು ಪ್ರಯಾಣಕ್ಕೆ ಎಡಮಂಗಲಕ್ಕೆ ಹೊರಟರೆ ನಿಗದಿತ ಸಮಯಕ್ಕೆ ತಲುಪುವುದು ಕಷ್ಟವಾಗಿದೆ.
ಒಂದು ವೇಳೆ ತಡವಾದರೆ ರೈಲು ಸಂಚರಿಸುವ ಕಾರಣ ಗೇಟ್ ಹಾಕಲಾಗುತ್ತದೆ. ಇನ್ನು ಅಲೆಕ್ಕಾಡಿಯಿಂದ ಪುಳಿಕುಕ್ಕು ತಲಪಬೇಕಾದರೆ ವಾಹನ ಸವಾರರು ಹರಸಾಹಸ ಪಡಬೇಕಾಗುತ್ತದೆ.


ರಸ್ತೆಯ ಹೊಂಡ ಗುಂಡಿ ಮುಚ್ಚುವ ಬದಲು ಕಾಂಕ್ರೀಟಿಕರಣಗೊಳಿಸಿದರೆ ಜನ ಮತ್ತು ವಾಹನ ಸಂಚಾರಕ್ಕೆ ಅನುಕೂಲವಾಗಬಹುದು. ಈ ಬಗ್ಗೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿಯವರು ಸಂಬಂಧಿಸಿದ ಇಲಾಖೆಗೆ ಸೂಚಿಸಿದರೆ ಕನಿಷ್ಟ ಗುಂಡಿ ಮುಚ್ಚುವ ಕೆಲಸವಾದರೂ ಆಗಬಹುದೆಂದು ಅಲ್ಲಿನ ಜನರ ಅಭಿಪ್ರಾಯವಾಗಿದೆ. ಮುಂದಿನ ಕ್ರಿಯಾ ಯೋಜನೆಯಲ್ಲಿ ಈ ರಸ್ತೆಯನ್ನು ಮರು ಡಾಮರೀಕರಣಗೊಳಿಸಲು ಮುಂದಾಗಬೇಕೆಂದು ಗ್ರಾಮಸ್ಥರ ಬೇಡಿಯಾಗಿದೆ.
