
ಕಡಬ: ಆನ್ ಲೈನ್ ಮೂಲಕ ಕಡಬದ ಇಬ್ಬರು ಯುವಕರು ಹಣ ಕಳೆದುಕೊಂಡಿರುವ ಬಗ್ಗೆ ಪ್ರತ್ಯೇಕ ಎರಡು ಪ್ರಕರಣಗಳು ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.


ಪ್ರಕರಣ 1: ಕಡಬದ ನರೇಶ್ ರೈ ಎಂಬವರು ಯುವಕ ಸೆ.5ರಂದು ಬೆಳಿಗ್ಗೆ ಗೂಗಲ್ನಲ್ಲಿ ಟ್ರೇಡಿಂಗ್ ಬಗ್ಗೆ ಸರ್ಚ್ ಮಾಡುತ್ತಿದ್ದಾಗ ಅದರಲ್ಲಿದ್ದ ಟ್ರೇಡಿಂಗ್ ಆ್ಯಪ್ ಲಿಂಕ್ ಕ್ಲಿಕ್ ಮಾಡಿದಾಗ 802 ಸೆಂಟ್ರಮ್ ಸ್ಮಾರ್ಟ್ ಇನ್ವೆಸ್ಟರ್ ಕ್ಲಬ್ ಎಂಬ ವಾಟ್ಸಪ್ ಗ್ರೂಪ್ ತೆರೆದಿದ್ದು ಗ್ರೂಪ್ನಲ್ಲಿ ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡಿ ಸೆಂಟ್ರಮ್ ಹೆಚ್ಎನ್ಐ ಟ್ರೇಡಿಂಗ್ ಆ್ಯಪ್ ಲಿಂಕ್ ಕಳುಹಿಸಿದ್ದದ್ದರು.
ಲಿಂಕ್ ಮೂಲಕ ಸೆಂಟ್ರಮ್ ಹೆಚ್ಎನ್ಐ ಆಪ್ ಡೌನ್ಲೋಡ್ ಮಾಡಿದ್ದಾರೆ. ನಂತರ ವಾಟ್ಸಪ್ ಮೂಲಕ ಸಂಪರ್ಕಿಸಿ ಕಡಿಮೆ ದರದಲ್ಲಿ ಐಪಿಒ ಮತ್ತು ಸ್ಟಾಕ್ಗಳನ್ನು ತಮ್ಮ ಆ್ಯಪ್ ಮೂಲಕ ನೀಡುವುದಾಗಿ ತಿಳಿಸಿದ ಮೇರೆಗೆ ಯುವಕ ಹಂತ ಹಂತವಾಗಿ ಅಪರಿಚಿತ ವ್ಯಕ್ತಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿದ್ದಾರೆ. ಸದ್ರಿ ಹಣವು ಲಾಭಾಂಶ ಸಮೇತವಾಗಿ ಆ್ಯಪ್ನಲ್ಲಿ ತೋರಿಸುತ್ತಿದ್ದರೂ ವಿದ್ಡ್ರಾ ಮಾಡಲು ಪ್ರಯತ್ನಿಸಿದಾಗ ವಿದ್ಡ್ರಾ ಆಗಿರುವುದಿಲ್ಲ.
ಈ ರೀತಿಯಾಗಿ ಅಪರಿಚಿತ ವ್ಯಕ್ತಿಗಳು ವಾಟ್ಸಪ್ನಲ್ಲಿ ಸೆಂಟ್ರಮ್ ಸ್ಟಾಕ್ ಟ್ರೇಡಿಂಗ್ ಬ್ರೋಕರ್ಸ್ ಎಂದು ನಂಬಿಸಿ 3.44 ಲಕ್ಷ ರೂ. ಪಡೆದುಕೊಂಡು ಮೋಸ ಮಾಡಿದ್ದಾರೆ ಎಂದು ಯುವಕ ನೀಡಿದ ದೂರಿನಂತೆ ಮಂಗಳೂರಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ 2: ಅಜ್ಜನ ಮೊಬೈಲ್ ವಾಟ್ಸಪ್ ಹ್ಯಾಕ್ ಮಾಡಿ ಮೊಮ್ಮಗನ ವಾಟ್ಸಪ್ಗೆ ’ಪಿಎಂ ಕಿಸಾನ್ ಯೋಜನ. ಆ್ಯಪ್’ ಎಂಬ ಆ್ಯಪ್ ಫೈಲ್ ಕಳಿಸಿ 1,63,190 ರೂ.ವಂಚಿಸಿರುವ ಪ್ರಕರಣವೊಂದು ವರದಿಯಾಗಿದೆ. ಈ ಪ್ರಕರಣದಲ್ಲಿ ಹಣ ಕಳೆದುಕೊಂಡಿರುವ ಕಡಬದ ಯುವಕ ಮಂಗಳೂರಿನ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ


ಕಡಬದ ಸುಹಾಸ್ .ಕೆ ಎಂಬ ಯುವಕನ ಮೊಬೈಲ್ಗೆ ಸೆ.26ರಂದು ಅವರ ಅಜ್ಜನ ವಾಟ್ಸಪ್ ನಂಬ್ರದಿಂದ ’ಪಿಎಂ ಕಿಸಾನ್ ಯೋಜನ. ಆ್ಯಪ್’ ಎಂಬ ಹೆಸರಿನ ಆ್ಯಪ್ ಫೈಲ್ ಬಂದಿದೆ. ’ಪಿಎಂ ಕಿಸಾನ್ ಯೋಜನ’ ಎಂದು ಬರೆದಿದ್ದರಿಂದ ಅದನ್ನು ಯುವಕ ಕ್ಲಿಕ್ ಮಾಡಿ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ. ನಂತರ ಸೆ.27ರಂದು ಯುವಕನ ಸಿಮ್ಕಾರ್ಡ್ ನೆಟ್ವರ್ಕ್ ತೋರಿಸದೇ ಇದ್ದ ಹಿನ್ನೆಲೆಯಲ್ಲಿ ಅವರು ಸೆ.30ರಂದು ಸಮೀಪದ ಮೊಬೈಲ್ ಶಾಪ್ಗೆ ಹೋಗಿ ಹೊಸ ಸಿಮ್ ಕಾರ್ಡ್ ಖರೀದಿಸಿದ್ದರು.
ಅ.1ರಂದು ಯುವಕ ಪೇಟಿಎಂ ಪರಿಶೀಲಿಸಿದಾಗ ಬ್ಯಾಂಕ್ ಖಾತೆಯಲ್ಲಿ ಅಂತಿಮ ಶಿಲ್ಕು ರೂ.414 ಮಾತ್ರ ತೋರಿಸುತಿತ್ತು. ಅ.1 ಮತ್ತು 2 ರಂದು ಬ್ಯಾಂಕ್ಗೆ ರಜೆ ಇದ್ದ ಹಿನ್ನೆಲೆಯಲ್ಲಿ ಅ.3ರಂದು ಬ್ಯಾಂಕ್ಗೆ ತೆರಳಿ ಪರಿಶೀಲನೆ ಮಾಡಿದಾಗ ಯುಪಿಐ ಮೂಲಕ ಹಣ ವರ್ಗಾವಣೆಯಾಗಿರುವುದು ಕಂಡು ಬಂದಿರುವುದರಿಂದ ಪಾಸ್ ಬುಕ್ ಎಂಟ್ರಿ ಮಾಡಿ ನೋಡಿದಾಗ ಯುವಕನ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಹಣ ಕಡಿತಗೊಂಡಿರುವುದು ಕಂಡುಬಂದಿದೆ.
ಇದಾದ ನಂತರ ಯುವಕನ ಅಜ್ಜನ ಮೊಬೈಲ್ ಹ್ಯಾಕ್ ಮಾಡಿ ಅವರ ಸಂಪರ್ಕದಲ್ಲಿರುವ ಎಲ್ಲರಿಗೂ ಆಪ್ ಫೈಲ್ ಕಳುಹಿಸಿರುವುದು ತಿಳಿದುಬಂದು ಅವರಲ್ಲಿ ವಿಚಾರಿಸಿದಾಗ ಆ್ಯಪ್ ಅನ್ಇನ್ಸ್ಟಾಲ್ ಮಾಡಿ ಸರಿಪಡಿಸಿದ್ದಾಗಿ ತಿಳಿಸಿದ್ದಾರೆ. ಈ ರೀತಿಯಾಗಿ ಯುವಕನ ಅಜ್ಜನ ವಾಟ್ಸಪ್ ಹ್ಯಾಕ್ ಮಾಡಿ ಯುವಕನ ವಾಟ್ಸಪ್ಗೆ ’ಪಿ.ಎಂ.ಕಿಸಾನ್ ಯೋಜನ.ಆ್ಯಪ್’ ಎಂಬ ಹೆಸರಿನ ಆಪ್ ಕಳುಹಿಸಿ 1,63,190 ರೂ.ವಂಚಿಸಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಯುವಕ ನೀಡಿದ ದೂರಿನಂತೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
